ಜಯಾಗೆ ಜೈಲು ಶಿಕ್ಷೆ: 16 ಅಭಿಮಾನಿಗಳು ಆತ್ಮಹತ್ಯೆ, ಹೃದಯಾಘಾತಕ್ಕೆ ಬಲಿ

ಸೋಮವಾರ, 29 ಸೆಪ್ಟಂಬರ್ 2014 (11:35 IST)
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಅವರ ನೆಚ್ಚಿನ ಅಭಿಮಾನಿಗಳಿಗೆ ತೀವ್ರ ಆಘಾತಕರ ಸುದ್ದಿಯಾಗಿ ಪರಿಣಮಿಸಿದೆ. ಜಯಾಗೆ ಶಿಕ್ಷೆ ವಿಧಿಸಿದ ಬಳಿಕ ಕನಿಷ್ಠ 16 ಜನರು ಆತ್ಮಹತ್ಯೆ ಮತ್ತು ಹೃದಯಾಘಾತಕ್ಕೆ ಗುರಿಯಾಗಿ ಸತ್ತಿದ್ದಾರೆ.
 
ಇಬ್ಬರನ್ನು ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಗೆ ಸೇರಿಸಲಾಗಿದೆ. ಮೂವರು ಅಭಿಮಾನಿಗಳು ನೇಣು ಹಾಕಿಕೊಂಡು ಸತ್ತಿದ್ದರೆ, ಒಬ್ಬ ಎಐಎಡಿಎಂಕೆ ಬೆಂಬಲಿಗ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡಿದ್ದಾನೆ.  ಇನ್ನೊಬ್ಬ ವ್ಯಕ್ತಿ ಚಲಿಸುತ್ತಿರುವ ಬಸ್ಸಿನ ಎದುರು ಹಾರಿ ಸತ್ತಿದ್ದಾನೆ. ಇನ್ನೊಬ್ಬ ವ್ಯಕ್ತಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
10 ಜನರು ಜಯಾಗೆ ಜೈಲು ಶಿಕ್ಷೆಯಿಂದ ತೀವ್ರ ಆಘಾತಗೊಂಡು ಹೃದಯಾಘಾತದಿಂದ ಸತ್ತಿದ್ದಾರೆ.
 
12ನೇ ತರಗತಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದು ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೊಬ್ಬ ಅಭಿಮಾನಿ ತಿರುಪುರದಲ್ಲಿ ತನ್ನ ಕಿರುಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಇಂತಹ ಪರಮಾವಧಿಯ ಪ್ರತಿಕ್ರಿಯೆಗಳು ಜಯಾ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದು, ಇಂತಹ ಕ್ರಮಕ್ಕೆ ಮುಂದಾಗದಂತೆ ಕರೆ ನೀಡಿದ್ದಾರೆ.

ಜಯಲಲಿತಾ ಜೊತೆ ಜನರ ಜೊತೆ ಸಂಬಂಧ ಇದನ್ನು ತೋರಿಸುತ್ತದೆ. ರಾಜ್ಯದಲ್ಲಿ ಪ್ರತಿಯೊಬ್ಬರೂ ಅಮ್ಮಾರನ್ನು ತಾಯಿಯಂತೆ ಭಾವಿಸಿದ್ದರು ಎಂದು ಮಹಿಳಾ ವಿಭಾಗದ ಸರಸ್ವತಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ