ತಮಿಳುನಾಡು ಮಾಜಿ ಮುಖ್ಯಮಂತ್ರಿ, ಎಐಡಿಎಂಕೆ ನಾಯಕಿ, ರಾಜ್ಯದ ಜನರ ಪಾಲಿನ 'ಅಮ್ಮ 'ಜಯಲಲಿತಾ ಸಾವಿನ ಕುರಿತು ಹಬ್ಬಿರುವ ವದಂತಿಗಳಿಗೆ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಇಂದು ತೆರೆ ಎಳೆದಿದ್ದು ಸಾವಿಗೂ ಮುನ್ನ ಜಯಾ ರಕ್ತ ಸಂಪೂರ್ಣ ಕೆಟ್ಟಿತ್ತು ಎಂಬ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಇಂದು ಚೆನ್ನೈಗೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿರುವ ರಿಚರ್ಡ್ ಬೆಲ್, ಜಯಾ ಅವರಿಗೆ ತೀವ್ರ ತರಹದ ಸಕ್ಕರೆ ಕಾಯಿಲೆ ಇತ್ತು. ಹೀಗಾಗಿ ನಾವು ನೀಡಿದ ಚಿಕಿತ್ಸೆಗೆ ಅವರ ದೇಹ ಸ್ಪಂದಿಸುತ್ತಿರಲಿಲ್ಲ. ನಾವು ಅತ್ಯುತ್ತಮವಾದ ಚಿಕಿತ್ಸೆಯನ್ನೇ ನೀಡಿದ್ದೆವು. ಆದರೆ ಅವರ ಆರೋಗ್ಯ ಸುಧಾರಣೆ ಕ್ಲಿಷ್ಟಕರವಾಗಿತ್ತು. ಸಕ್ಕರೆ ಕಾಯಿಲೆಯೇ ಅವರಿಗೆ ಮುಳುವಾಯಿತು, ಎಂದಿದ್ದಾರೆ.
ಮುಂದುವರೆದ ಅವರು ತೀವ್ರ ನಿಗಾ ಘಟಕದಲ್ಲಿದ್ದಾಗ ಜಯಾ ಎಚ್ಚರವಾಗಿದ್ದರು. ವೆಂಟಿಲೇಟರ್‌ನಲ್ಲಿಟ್ಟಾಗ ಮಾತ್ರ ಅವರು ಪ್ರಜ್ಞಾಹೀನರಾಗಿದ್ದರು. ಸಾವಿಗೂ ಮುನ್ನ ಜಯಾ ರಕ್ತ ಸಂಪೂರ್ಣ ಕೆಟ್ಟಿತ್ತು. ದೇಹದಲ್ಲಿ ಸೋಂಕು ಹೆಚ್ಚಿದ್ದರಿಂದ ರಕ್ತದಲ್ಲಿ ವಿಷಕಾರಿ ಅಂಶ ಹೆಚ್ಚಾಗುತ್ತಲೇ ಇತ್ತು. ಹೀಗಾಗಿ ಆಗಾಗ ಅಂಗವೈಫಲ್ಯವಾಗುತ್ತಿತ್ತು. ಹೀಗಾಗಿ ಎಷ್ಟೇ ಉತ್ತಮವಾದ ಚಿಕಿತ್ಸೆಯನ್ನು ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ಅವರು ಜಯಾ ಸಾವಿನ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.