ಜಯಲಲಿತಾ ಜೈಲಿನಿಂದ ಹೊರಬರಲು ಮತ್ತೊಂದು ಮಾರ್ಗವಿದೆಯಂತೆ!

ಭಾನುವಾರ, 28 ಸೆಪ್ಟಂಬರ್ 2014 (10:53 IST)
ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ 4 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಜಯಲಲಿತಾ, ಜೈಲಿನಿಂದ ಹೊರಬರಬೇಕಾದರೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ವಿಶೇಷ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ತರುವುದೊಂದೇ ಇರುವ ಮಾರ್ಗ. 
 
ಆದರೆ, ಸುಪ್ರೀಂಕೋರ್ಟ್‌ ಆದೇಶ ಮತ್ತು ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯ ಮೂರ್ತಿಗಳ ಸಲಹೆಯಂತೆ ವಿಶೇಷ ನ್ಯಾಯಾ ಲಯ ಸ್ಥಾಪನೆಯಾಗಿರುವುದರಿಂದ ಅವರು ರಾಜ್ಯ ಹೈಕೋರ್ಟ್‌ನಲ್ಲೇ ಮೇಲ್ಮನವಿ ಸಲ್ಲಿಸ ಬೇಕಾಗುತ್ತದೆ. ಪ್ರಸ್ತುತ ಹೈಕೋರ್ಟ್‌ಗೆ ರಜೆ ಇರುವುದು ಜಯಲಲಿತಾ ಪಾಲಿಗೆ ಸವಾಲಾಗಿದೆ. ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ತಂದು ಜಾಮೀನು ಪಡೆ ಯಲು ಬೇಕಾಗುವ ಕಾಲ ಎಷ್ಟು ಎಂಬುದನ್ನು ತಕ್ಷಣಕ್ಕೆ ಅಂದಾಜಿಸುವುದು ಸಾಧ್ಯವಿಲ್ಲ. 
 
ನ್ಯಾಯಾಲಯಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ವಾರದ ಎರಡು ದಿನ ಅಂದರೆ ಮಂಗಳವಾರ ಮತ್ತು ಗುರುವಾರ ಮಾತ್ರ ರಜಾಕಾಲದ ನ್ಯಾಯಪೀಠಗಳು ಇರುತ್ತವೆ. ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ವಾರದ ಎಲ್ಲಾ ದಿನ ಅವಕಾಶವಿದ್ದರೂ ಅದು ವಿಚಾರಣೆಗೆ ಬರುವುದು ಕಲಾಪ ಇರುವ ಎರಡು ದಿನ ಮಾತ್ರ. 
 
ಅನಾರೋಗ್ಯ ನೆಪ: ಇಷ್ಟರ ನಡುವೆಯೂ ಅನಾರೋಗ್ಯದ ಕಾರಣದಿಂದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅನುಮತಿ ಪಡೆದು ಶೀಘ್ರವೇ ಮೇಲ್ಮನವಿ ವಿಚಾರಣೆಗೆ ಅನುಮತಿ ಪಡೆದುಕೊಳ್ಳಲು ಅವಕಾಶವಿದೆ. ಆದರೆ, ಇದು ಮುಖ್ಯ ನ್ಯಾಯಮೂರ್ತಿಗಳ ವಿವೇಚನೆಗೆ ಬಿಟ್ಟ ವಿಚಾರ ಎನ್ನುತ್ತಾರೆ ಕಾನೂನು ತಜ್ಞರು. 
 
ಜೈಲು ಶಿಕ್ಷೆ 3 ವರ್ಷಕ್ಕಿಂತ ಕಡಿಮೆಯಾಗಿದ್ದರೆ ವಿಶೇಷ ನ್ಯಾಯಾಲಯವೇ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಒಂದು ತಿಂಗಳೊಳಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ಮಧ್ಯಂತರ ಆದೇಶ ಪಡೆಯಲು ಅವಕಾಶ ಮಾಡಿಕೊಡುತ್ತಿತ್ತು. ಆದರೆ, ಶಿಕ್ಷೆಯ ಪ್ರಮಾಣ 4 ವರ್ಷ ಇರುವುದರಿಂದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತರುವವರೆಗೆ ಜೈಲಿನಲ್ಲೇ ಇರಬೇಕಾಗುತ್ತದೆ. 
 
ರಾಜ್ಯದಲ್ಲೇ ಮೇಲ್ಮನವಿ ಸಲ್ಲಿಸಬೇಕು: ತೀರ್ಪು ನೀಡಿರುವುದು ಕರ್ನಾಟಕದ ವಿಶೇಷ ನ್ಯಾಯಾಲಯ ವಾಗಿರುವುದರಿಂದ ಜಯಲಲಿತಾ ಈ ತೀರ್ಪಿನ ವಿರುದ್ಧ ರಾಜ್ಯ ಹೈಕೋರ್ಟ್‌ನಲ್ಲೇ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ಸುಪ್ರೀಂಕೋರ್ಟ್‌ ಆದೇಶದಂತೆ ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಮೇರೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಈ ಹಿಂದೆ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಕೆಲವು ಪ್ರಕ್ರಿಯೆಗಳನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ನಲ್ಲೇ ಮೇಲ್ಮನವಿ ಸಲ್ಲಿಸಲಾಗಿತ್ತು. ಹೀಗಾಗಿ ಅಂತಿಮ ತೀರ್ಪಿನ ವಿರುದ್ಧವೂ ರಾಜ್ಯ ಹೈಕೋರ್ಟ್‌ನಲ್ಲೇ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ತಮಿಳುನಾಡು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರೂ ಅದನ್ನು ಸ್ವೀಕರಿಸುವ ಸಾಧ್ಯತೆ ಕಡಿಮೆ. 
 
ಜಯಾಗೆ ಅನರ್ಹತೆಯಿಂದ ಪಾರಾಗಲು ಸಾಧ್ಯವೇ ಇರಲಿಲ್ಲ 
 
ಒಂದು ವೇಳೆ ಜಯಲಲಿತಾಗೆ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಿ ವಿಶೇಷ ನ್ಯಾಯಾಲಯವೇ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿದ್ದರೂ ಜಯಲಲಿತಾ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. 
 
ಏಕೆಂದರೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಶಾಸಕರು ಅಥವಾ ಸಂಸದರಿಗೆ ಎಷ್ಟು ಕಡಿಮೆ ಪ್ರಮಾಣದಲ್ಲಿ ಶಿಕ್ಷೆಯಾದರೂ ತಕ್ಷಣದಿಂದ ಅವರು ಶಾಸಕ ಅಥವಾ ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಹೀಗಾಗಿ ಜಯಲಲಿತಾಗೆ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಿದ್ದರೆ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಬಹುದಿತ್ತೇ ಹೊರತು ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. 
 
ಸೆಪ್ಟೆಂಬರ್‌ ಅಶುಭ 
 
2001ರಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿ ಪಟ್ಟ ಕಳೆದುಕೊಂಡಿದ್ದು ಸೆಪ್ಟೆಂಬರ್‌ನಲ್ಲಿ. ಇದೀಗ ಅಕ್ರಮ ಆಸ್ತಿ ಗಳಿಕೆ ಕೇಸಲ್ಲಿ ಶಿಕ್ಷೆಗೊಳಗಾಗಿ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಯಬೇಕಾಗಿ ಬಂದಿರುವುದೂ ಸೆಪ್ಟೆಂಬರ್‌ನಲ್ಲಿ. ಹೀಗಾಗಿ ಸೆಪ್ಟೆಂಬರ್‌ ಎಂಬುದು ಜಯಲಲಿತಾ ಅವರಿಗೆ ಶುಭಕಾರಿ ಅಲ್ಲ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. 
 

ವೆಬ್ದುನಿಯಾವನ್ನು ಓದಿ