ಅಕ್ರಮ ಆಸ್ತಿ ಪ್ರಕರಣ: ಕರ್ನಾಟಕ, ಡಿಎಂಕೆ ಅರ್ಜಿಗೆ ಜಯಾ ಸವಾಲು

ಸೋಮವಾರ, 24 ಆಗಸ್ಟ್ 2015 (16:31 IST)
ಅಕ್ರಮ ಆಸ್ತಿ ಪ್ರಕರಣದಲ್ಲಿ ತಮ್ಮ ಖುಲಾಸೆ ಪ್ರಶ್ನಿಸಿ ಕರ್ನಾಟಕ ಸರ್ಕಾರ ಮತ್ತು ಡಿಎಂಕೆ ಸಲ್ಲಿಸಿರುವ ಅರ್ಜಿಗಳ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ.

 
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಾರವರನ್ನು ಖುಲಾಸೆಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಈ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಸೋಮವಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ.
 
ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಾಮೂರ್ತಿಗಳು ನೀಡಿರುವ ತೀರ್ಪು ಸರಿಯಾಗಿದೆ. ತೀರ್ಪಿನಲ್ಲಿ ಯಾವುದೇ ತಪ್ಪಾಗಿಲ್ಲ, ಹೀಗಾಗಿ ಕರ್ನಾಟಕ ಸರ್ಕಾರದ ಅರ್ಜಿಯನ್ನು ವಜಾಗೊಳಿಸಬೇಕೆಂದು ಜಯಾ ತಮ್ಮ ಅಫಡವಿಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
 
ಜಯಲಲಿತಾ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಲೆಕ್ಕಾಚಾರದಲ್ಲಿ ಭಾರೀ ತಪ್ಪಾಗಿದೆ. ಜತೆಗೆ ಸರ್ಕಾರಿ ವಿಶೇಷ ಅಭಿಯೋಜಕರಾದ ಬಿ.ವಿ ಆಚಾರ್ಯ ಅವರಿಗೆ ವಾದ ಮಾಡಲು ಅವಕಾಶ ಸಿಗಲಿಲ್ಲ ಎಂದು ಹೇಳಿ ಕರ್ನಾಟಕ ಸರ್ಕಾರ 2,700 ಪುಟಗಳ ಮೇಲ್ಮನವಿ ಅರ್ಜಿಯನ್ನು ಜೂನ್ 23ರಂದು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿತ್ತು.
 
ಅಲ್ಲದೇ ಜಯಾ ಪರ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿಗೆ ತಡೆ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿರುವುದಾಗಿ ರಾಜ್ಯ ಸರ್ಕಾರದ ಪರ ವಕೀಲ ಜೋಸೆಫ್ ಅರಿಸ್ಟಾಟಲ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ