ಜಯಲಲಿತಾ ಸಾವಿನಲ್ಲಿ ಪಿತೂರಿ, ಷಡ್ಯಂತ್ರ ನಡೆದಿಲ್ಲ: ಏಮ್ಸ್ ವೈದ್ಯರು

ಸೋಮವಾರ, 6 ಮಾರ್ಚ್ 2017 (20:32 IST)
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಾವಿನ ಬಗ್ಗೆ ಹರಡಿರುವ ನೂರಾರು ವದಂತಿಗಳಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ತಮಿಳುನಾಡು ಸರಕಾರ ಏಮ್ಸ್ ವೈದ್ಯರ ವರದಿಯನ್ನು ಕೇಳಿತ್ತು. ಇದೀಗ ವರದಿ ಬಿಡುಗಡೆಯಾಗಿದ್ದು ಅವರ ಸಾವಿನ ಬಗ್ಗೆ ಅನುಮಾನ ಬೇಡ ಎಂದು ವರದಿಯಲ್ಲಿ ದಾಖಲಿಸಲಾಗಿದೆ.
 
ಜಯಲಲಿತಾ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರಿಗೆ ದೆಹಲಿಯ ಏಮ್ಸ್ ವೈದ್ಯರು ಚಿಕಿತ್ಸೆ ನೀಡಿದ್ದರು. ರಾಜ್ಯದ ವೈದ್ಯರನ್ನು ಜನ ನಂಬದಿರುವ ಹಿನ್ನೆಲೆಯಲ್ಲಿ ಏಮ್ಸ್ ವೈದ್ಯರಿಗೆ ಜಯಾ ಚಿಕಿತ್ಸೆಯ ಬಗ್ಗೆ ವರದಿ ನೀಡುವಂತೆ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಕೋರಿದ್ದರು.
 
ದೆಹಲಿಯ ಏಮ್ಸ್ ವೈದ್ಯರ ತಂಡ 19 ಪುಟಗಳ ವರದಿಯನ್ನು ತಮಿಳುನಾಡು ಸರಕಾರಕ್ಕೆ ಸಲ್ಲಿಸಿದೆ. ಸರಕಾರ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಉಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.
 
ಜಯಲಲಿತಾ ಅವರಿಗೆ ಆರಂಭದ ದಿನದಿಂದಲೂ ಅತ್ಯುತ್ತಮ ಮಟ್ಟದ ಚಿಕಿತ್ಸೆ ನೀಡಲಾಗಿದೆ. ಅವರ ಸಾವಿನಲ್ಲಿ ಯಾವುದೇ ರೀತಿಯ ಪಿತೂರಿ ನಡೆದಿಲ್ಲವೆಂದು ಏಮ್ಸ್ ಮತ್ತು ಅಪೋಲೋ ವೈದ್ಯರು ವರದಿ ಸಲ್ಲಿಸಿದ್ದಾರೆ ಎಂದು ತಮಿಳುನಾಡು ಸರಕಾರ ಸ್ಪಷ್ಟಪಡಿಸಿದೆ.
 
ದಿವಂಗತ ಮಾಜಿ ಸಿಎಂ ಜಯಲಲಿತಾ ಸೆಪ್ಟೆಂಬರ್ 22 ರಂದು ಜ್ವರ ಮತ್ತು ಡಿಹೈಡ್ರೇಶನ್‌‌ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಡಿಸೆಂಬರ್ 6 ರಂದು ಜಯಲಲಿತಾ ಇಹಲೋಕ ತ್ಯಜಿಸಿದ್ದಾರೆ ಎಂದು ಘೋಷಿಸಲಾಗಿತ್ತು.
 
ತಮಿಳುನಾಡು ಸರಕಾರದ ಮನವಿಯ ಮೇರೆಗೆ ಜಯಲಲಿತಾ ಅವರ ಆರೋಗ್ಯ ಪರೀಕ್ಷೆಗಾಗಿ ಏಮ್ಸ್ ವೈದ್ಯರ ತಂಡವನ್ನು ನೇಮಿಸಲಾಗಿತ್ತು. ಅಕ್ಟೋಬರ್ 5 ರಿಂದ ಡಿಸೆಂಬರ್ 6 ರವರೆಗೆ ಏಮ್ಸ್‌ನ ಜಿ.ಸಿ.ಖಿಲ್‌ನಾನಿ ನೇತೃತ್ವದ ವೈದ್ಯರ ತಂಡ ಐದು ಬಾರಿ ಚೆನ್ನೈಗೆ ಆಗಮಿಸಿ ಚಿಕಿತ್ಸೆ ನೀಡಿತ್ತು.  
 
ಕಳೆದ ಮಾರ್ಚ್ 5 ರಂದು ತಮಿಳುನಾಡು ಸರಕಾರ ಏಮ್ಸ್ ವೈದ್ಯರಿಗೆ ಚಿಕಿತ್ಸೆಯ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಕೋರಿತ್ತು. ಅದರಂತೆ, ಇದೀಗ ಏಮ್ಸ್ ವೈದ್ಯರ ತಂಡ ತಮಿಳುನಾಡು ಸರಕಾರಕ್ಕೆ ವರದಿ ಸಲ್ಲಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ