ಪಕ್ಷದ ವಿರುದ್ದವೇ ವಾಗ್ದಾಳಿ ನಡೆಸಿದ ಶಾಸಕನನ್ನು ಉಚ್ಚಾಟಿಸಿದ ಸಿಎಂ ಜಯಲಲಿತಾ

ಗುರುವಾರ, 28 ಜನವರಿ 2016 (15:23 IST)
ಎಐಎಡಿಎಂಕೆ ಪಕ್ಷದ ವಿರುದ್ಧವೇ ಟೀಕಾ ಪ್ರಹಾರ ನಡೆಸಿದ್ದ ಹಾರ್ಬೌರ್ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಪಿ.ಕರುಪ್ಪಯ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಪಕ್ಷದ ಮುಖ್ಯಸ್ಥೆ, ಮುಖ್ಯಮಂತ್ರಿ ಜೆ.ಜಯಲಲಿತಾ ಆದೇಶ ಹೊರಡಿಸಿದ್ದಾರೆ. 
 
ಶಾಸಕ ಕರುಪ್ಪಯ್ಯ ತಮಿಳು ಮ್ಯಾಗ್‌ಜಿನ್‌ಗೆ ಸಂದರ್ಶನ ನೀಡಿ, ವಿಧಾನಸಭೆಯಲ್ಲಿ ಶಾಸಕರು ಮುಖ್ಯಮಂತ್ರಿ ಜಯಲಲಿತಾ ಭಾಷಣ ಮಾಡುವಾಗ ತಂತ್ರಜ್ಞಾನದ ರೋಬೋಟ್‌ಗಳಂತೆ ಪ್ರತಿ ನಿಮಿಷಕ್ಕೊಮ್ಮೆ ಡೆಸ್ಕ್ ಬಡಿಯುತ್ತಾರೆ ಎಂದು ಲೇವಡಿ ಮಾಡಿದ್ದರು.
 
ರಾಜ್ಯದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭ್ರಷ್ಟರಾಗಿದ್ದಾರೆ, ಪ್ರತಿಯೊಬ್ಬ ಸಚಿವನಿಗೆ 5 ರಿಂದ 6 ಆಪ್ತ ಸಹಾಯಕರಿದ್ದಾರೆ. ಕೇವಲ ಟವೆಲ್ ತರಲು ಕೂಡಾ ಒಬ್ಬ ಆಪ್ತ ಸಹಾಯಕನನ್ನು ನೇಮಿಸಿಕೊಳ್ಳಲಾಗಿದೆ ಎಂದು ತಮ್ಮ ಪಕ್ಷದ ವಿರುದ್ಧವೇ ಕರುಪ್ಪಯ್ಯ ವಾಗ್ದಾಳಿ ನಡೆಸಿದ್ದರು.  
 
ಪ್ರಸಕ್ತ ತಿಂಗಳ ಆರಂಭದಲ್ಲಿಯೇ ಪಕ್ಷದ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದರಿಂದ ಎಐಎಡಿಎಂಕೆ ಪದಾಧಿಕಾರಿ ಎನ್‌.ಸಂಪತ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಆದೇಶ ಹೊರಡಿಸಿದ್ದರು.

ವೆಬ್ದುನಿಯಾವನ್ನು ಓದಿ