ಕೋಮಾ ಸ್ಥಿತಿಗೆ ತಲುಪಿದ ಜಯಲಲಿತಾ

ಸೋಮವಾರ, 5 ಡಿಸೆಂಬರ್ 2016 (16:06 IST)
ಭಾನುವಾರ ಸಂಜೆ ಹೃದಯಾಘಾತಕ್ಕೊಳಗಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು ಕೋಮಾ ಸ್ಥಿತಿಗೆ ತಲುಪಿರುವ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ. 

 
ಜಯಾ ಆರೋಗ್ಯದ ಬಗ್ಗೆ ಅಪೋಲೋ ಆಸ್ಪತ್ರೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದ್ದು, ಸಿಎಂ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ. ಕ್ಷಣಕ್ಷಣಕ್ಕೂ ಅವರ ಸ್ಥಿತಿ ಗಂಭೀರವಾಗುತ್ತಿದೆ ಎಂದು ಹೇಳಿದೆ.
 
ಜೀವ ರಕ್ಷಕವನ್ನು ಅಳವಡಿಸಿ ಜಯಾರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರನ್ನು ದಾಖಲಿಸಿಲಾಗಿರುವ ಚೆನ್ನೈನ ಅಪೋಲೋ ಆಸ್ಪತ್ರೆ ಮುಂದೆ ಸಾವಿರಾರು ಅಭಿಮಾನಿಗಳು ಗೋಳಾಡುತ್ತಿದ್ದಾರೆ. ಆಸ್ಪತ್ರೆ ಮುಂದೆ ಸೇರುತ್ತಿರುವ ಸಿಎಂ ಅಭಿಮಾನಿಗಳ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಆಸ್ಪತ್ರೆಗೆ ಬರುತ್ತಿರುವ ಅಂಬುಲೆನ್ಸ್ ಸಂಚಾರಕ್ಕೂ ಅಡ್ಡಿಯುಂಟಾಗಿದೆ. 
 
ಹಣಕಾಸು ಸಚಿವ, ಜಯಾ ಬಲಗೈ ಬಂಟ ಪನ್ನಿರ್ ಸೆಲ್ವಂ, ಜಯಾ ಆಪ್ತ ಗೆಳತಿ ಶಶಿಕಲಾ ಆಸ್ಪತ್ರೆಯಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. 
 
ಜಯಾಗೆ ಹೆಚ್ಚಿನ ಚಿಕಿತ್ಸೆ ನೀಡಲು ದೆಹಲಿಯ ಏಮ್ಸ್‌ನಿಂದ ತಜ್ಞ ವೈದ್ಯರು ಚೈನ್ನೈಗೆ ಆಗಮಿಸುತ್ತಿದ್ದು ಕೆಲವೇ ಕ್ಷಣಗಳಲ್ಲಿ ಅಪೋಲೋ ಆಸ್ಪತ್ರೆಯನ್ನು ತಲುಪಲಿದ್ದಾರೆ.
 
ಸೆಪ್ಟೆಂಬರ್ 23 ರಂದು ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಅಪೋಲೋ ಆಸ್ಪತ್ರೆ ಸೇರಿದ್ದ ಜಯಾ ನಿನ್ನೆ ಸಂಜೆ ಹೃದಯಾಘಾತಕ್ಕೊಳಗಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ