ಇಂದಿನಿಂದ ಅಮ್ಮನ ರಾಜ್ಯಭಾರ ?

ಶುಕ್ರವಾರ, 22 ಮೇ 2015 (09:11 IST)
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ನಿರಪರಾಧಿಯೆಂದು ಖುಲಾಸೆಯಾಗಿರುವ ಜಯಲಲಿತಾ ಇಂದು ಅಥವಾ ನಾಳೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪುನಃ ಪಟ್ಟಕೇರಲಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಮತ್ತೆ ಅಮ್ಮನ ರಾಜ್ಯಭಾರ ಪ್ರಾರಂಭವಾಗಲಿದೆ.

ಇಂದು ಬೆಳಿಗ್ಗೆ ಎಐಡಿಎಂಕೆ ಪ್ರಧಾನ ಕಚೇರಿಯಲ್ಲಿ  ನಡೆದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಜಯಲಲಿತಾ ಅವರನ್ನು ಆಯ್ಕೆ ಮಾಡಲಾಯಿತು. ನಂತರ ಸಿಎಂ ಪನ್ನೀರ್ ಸೆಲ್ವಂ ರಾಜ್ಯಪಾಲ ರೋಸಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆಯನ್ನು ಸಲ್ಲಿಸಿದರು.
 
ಮಧ್ಯಾಹ್ನ 1.30ಕ್ಕೆ ರಾಜ್ಯಪಾಲ ರೋಸಯ್ಯ ಅವರನ್ನು ಭೇಟಿಯಾಗಲಿರುವ ಜಯಲಲಿತಾ ನಂತರ ಪಕ್ಷದ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್  (ಎಂಜಿಆರ್) , ಡಿಎಂಕೆ ಸಂಸ್ಥಾಪಕ ಸಿಎನ್ ಅಣ್ಣಾದೊರೈ, ಡಿಕೆ ಸಂಸ್ಥಾಪಕ ಇವಿ ರಾಮಸ್ವಾಮಿ ಅವರ ಪ್ರತಿಮೆಗಳಿಗೆ ಹೂವಿನ ಮಾಲೆ ಹಾಕಿ ಗೌರವ ಸಲ್ಲಿಸಲಿದ್ದಾರೆ.
 
ನಡೆಯುತ್ತಿರುವ ತ್ವರಿತಗತಿಯ ಬೆಳವಣಿಗೆಗಳನ್ನು ಗಮನಿಸಿದರೆ ಜಯಲಲಿತಾರವರು ಇಂದೇ ಪಟ್ಟಕೇರುತ್ತಾರೆ ಎಂಬ ಸೂಚನೆಗಳು ದೊರೆಯುತ್ತಿವೆ. ಆದರೆ ಇಂದು ತಪ್ಪಿದರೆ ನಾಳೆ ಜಯಲಲಿತಾರವರು ಪ್ರಮಾಣವಚನ ಸ್ಪೀಕರಿಸುವುದು ನಿಶ್ಚಿತವಾಗಿದೆ.
 
ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕದ ವಿಶೇಷ ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿದ್ದ ಪರಿಣಾಮ , ಜಯಾರವರು ಮುಖ್ಯಮಂತ್ರಿ ಪದವಿ ಮತ್ತು ಶ್ರೀರಂಗಮ್ ಕ್ಷೇತ್ರದ ಶಾಸಕತ್ವವನ್ನು ಕಳೆದುಕೊಂಡಿದ್ದರು. 
 
ಆದರೆ ತಮಿಳುನಾಡು ಮಾಜಿ ಸಿಎಂ ನಿರಪರಾಧಿ ಎಂದು ತೀರ್ಪು ನೀಡಿದ ಹೈಕೋರ್ಟ್ ಎಲ್ಲ ಆರೋಪಗಳಿಂದ ಅವರನ್ನು ಮುಕ್ತಗೊಳಿಸಿದೆ. 

ವೆಬ್ದುನಿಯಾವನ್ನು ಓದಿ