ಗೆಳತಿಯರೊಂದಿಗೆ ಜೈಲುಕೋಣೆ ಹಂಚಿಕೊಳ್ಳಲು ಅವಕಾಶ ನೀಡಲು ಜಯಾ ಮನವಿ

ಸೋಮವಾರ, 29 ಸೆಪ್ಟಂಬರ್ 2014 (16:03 IST)
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿ ಬೆಂಗಳೂರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಶೇಷ ಆತಿಥ್ಯ ನೀಡಲು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ. 

ತಮ್ಮ ಸ್ನೇಹಿತೆಯರಾದ  ಶಶಿಕಲಾ ನಟರಾಜನ್ ಮತ್ತು ವಿಎನ್‌ಜೆ ಇಳವರಸಿಯವರ ಜತೆ ಕಾರಾಗೃಹವನ್ನು ಹಂಚಿಕೊಳ್ಳಲು ಅವಕಾಶ ನೀಡುವಂತೆ ಜಯಲಲಿತಾರವರು ಜೈಲಿನ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಈಗ ತ್ಯಜಿಸಲ್ಪಟ್ಟಿರುವ ಜಯಾ ಸಾಕುಮಗ ಸುಧಾಕರನ್ ಗಣಿಧಣಿ ಜಿ. ಜನಾರ್ದನ ರೆಡ್ಡಿ ಅವರ ಮಾಜಿ ಸಹಾಯಕ ಮೆಹಫೂಜ್ ಅಲಿಖಾನ್‌ನೊಂದಿಗೆ ಜೈಲು ಕೋಣೆಯನ್ನು ಹಂಚಿಕೊಳ್ಳುತ್ತಿದ್ದಾರೆ. 
 
ಜಯಲಲಿತಾರವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ  ಜೈಲಿನ ಒಳಗಡೆ ಇರುವ ಆಸ್ಪತ್ರೆಯಲ್ಲಿ ಅವರನ್ನು ಇರಿಸಲಾಗಿದೆ. ಅನಾರೋಗ್ಯವೆಂದು ದೂರಿದ ಶಶಿಕಲಾ ಮತ್ತು ಇಳವರಸಿ ಸಹ ಜಯಾರವರ ಜತೆ ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿದ್ದಾರೆ. ಜಯಲಲಿತಾರವರಿಗಾಗಿ ವಿಐಪಿ ಸೆಲ್‌‌ನ್ನು ಸಿದ್ಧಪಡಿಸಲಾಗಿದ್ದು ವೈದ್ಯರು ಅನುಮತಿ ನೀಡಿದಾಗಲೆಲ್ಲ ಆಸ್ಪತ್ರೆಯ ವಾರ್ಡ್‌ಗೆ ಅವರನ್ನು ವರ್ಗಾಯಿಸಲಾಗುತ್ತದೆ.
 
ಶನಿವಾರ ರಾತ್ರಿ ಊಟವಾಗಿ ಅವರು ಹಣ್ಣುಗಳನ್ನು ತಿಂದರು. ಭಾನುವಾರ  ಬೆಳಿಗ್ಗೆ 5. 30 ರ ಸುಮಾರಿಗೆ ಎದ್ದು ಜೈಲು ಆವರಣದಲ್ಲಿ ಸುತ್ತಾಡಿದರು. 3 ತಮಿಳು ಮತ್ತು 2 ಇಂಗ್ಲೀಷ್ ಸುದ್ದಿಪತ್ರಿಕೆಗಳನ್ನು ತಂದುಕೊಡುವಂತೆ ಕೇಳಿಕೊಂಡ ಅವರು ಅದನ್ನು ಓದಿ ಹಿಂತಿರುಗಿಸಿದರು ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ