ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯದಲ್ಲಿ ಚೇತರಿಕೆ

ಶುಕ್ರವಾರ, 21 ಅಕ್ಟೋಬರ್ 2016 (14:46 IST)
ಅನಾರೋಗ್ಯಕ್ಕೀಡಾಗಿ ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯದಲ್ಲಿ ಗಣನೀಯ ಪ್ರಗತಿ ಕಂಡು ಬಂದಿದ್ದು ಅವರು ಆಸ್ಪತ್ರೆಯಿಂದ ಹಿಂತಿರುಗಲಿದ್ದಾರೆ ಎಂದು ವರದಿಯಾಗಿದೆ.

ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಜಯಾ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.  ಅವರು ಕುಳಿತುಕೊಂಡು ಸನ್ನೆಗಳ ಮೂಲಕ ಸ್ಪಂದಿಸುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಅವರು ನಿದ್ದೆ ಮಾಡದೇ ಸಂಪೂರ್ಣವಾಗಿ ಎಚ್ಚರವಿದ್ದಾರೆ. ಕೃತಕ ಉಸಿರಾಟ ವ್ಯವಸ್ಥೆಯನ್ನು ಮುಂದುವರೆಸಲಾಗಿದ್ದು ಟ್ಯೂಬ್ ತೆಗೆದ ಬಳಿಕ ಅವರು ಮಾತನಾಡಬಹುದು ಎನ್ನಲಾಗುತ್ತಿದೆ. 
 
ಜಯಾ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದ್ದು, ಪರಿಣಿತ ವೈದ್ಯರ ಚಿಕಿತ್ಸೆಯಿಂದ ಸೋಂಕು ಕಡಿಮೆಯಾಗಿದೆ. ಅವರ ಆರೋಗ್ಯದ ಬಗ್ಗೆ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ ಎಂದು ಪಕ್ಷದ ಕಡೆಯಿಂದಲೂ ಹೇಳಿಕೆ ಬಂದಿದೆ. 
 
ವೈದ್ಯರ ಸಲಹೆ ಮೇರೆಗೆ ಅವರು ವಿಶ್ರಾಂತಿ ಪಡೆಯುತ್ತಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ. ಆದಷ್ಟು ಬೇಗ ತಮ್ಮ ನಿವಾಸಕ್ಕೆ ಮರಳಲಿದ್ದಾರೆ. ಅವರ ಮೇಲೆ ದೇವರ ಅಭಯಹಸ್ತವಿದೆ ಎಂದು ಎಐಡಿಎಂಕೆ ವಕ್ತಾರೆ ಸರಸ್ವತಿ ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ