ಬಿಹಾರ್‌ನಂತೆ ಉ.ಪ್ರದೇಶದಲ್ಲೂ ಮಹಾಮೈತ್ರಿಕೂಟ ರಚನೆಗೆ ಸಿಎಂ ನಿತೀಶ್ ಕುಮಾರ್ ಸಿದ್ದತೆ

ಬುಧವಾರ, 3 ಫೆಬ್ರವರಿ 2016 (16:31 IST)
ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಉತ್ಸವದಲ್ಲಿರುವ ಜೆಡಿಯು, ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶದ ವಿಧಾನಸಬೆ ಚುನಾವಣೆಯಲ್ಲೂ ಮಹಾಮೈತ್ರಿಕೂಟ ರಚಿಸಲು ಸಿದ್ದತೆ ನಡೆಸಿದೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿ ಕ್ಷೇತ್ರಕ್ಕೆ ಆಗಮಿಸಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಮತ್ತೊಂದು ಮಹಾಮೈತ್ರಿಕೂಟ ಸಿದ್ದತೆಯ ಬಗ್ಗೆ ಸಂಕೇತ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಬಿಹಾರ್ ಉಪಮುಖ್ಯಮಂತ್ರಿ ಬಾಬು ಜಗದೇವ್ ಪ್ರಸಾದ್ ಖುಶ್ವಾ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ ಲಾಟಿಯಾ ಮಹೋತ್ಸವ ಕಾರ್ಯಕ್ರಮದಲ್ಲಿ ಅತಿ ಹಿಂದುಳಿದ ಖುಶ್ವಾ, ನಿಶಾದ್ ಸೈಯಾನಿ ಮತ್ತು ಮೌರ್ಯ ಜಾತಿಯ ಮುಖಂಡರು ಉಪಸ್ಥಿತರಿದ್ದ ಸಭೆಗೆ ಸಿಎಂ ನಿತೀಶ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
  
ಇದೊಂದು ಸಾಮಾಜಿಕ ಕಾರ್ಯಕ್ರಮ ಎಂದು ಜೆಡಿಯು ಹೇಳಿಕೆ ನೀಡಿದೆ. ಆದರೆ, ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ, ದಿ ಪೀಸ್ ಪಾರ್ಟಿ, ಕೃಷ್ಣಾ ಪಟೇಲ್ ಮತ್ತು ಅವರ ಪತ್ನಿ ಸೋನಾ ಲಾಲ್ ಪಟೇಲ್ ನೇತೃತ್ವದ ಅಪ್ನಾ ದಳ್ ಪಕ್ಷಗಳೊಂದಿಗೆ ಮೈತ್ರಿ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
 
ರಾಷ್ಟ್ರೀಯ ಲೋಕದಳ ಪಕ್ಷಕ್ಕೆ ಜಾಟ್- ಮುಸ್ಲಿಂ ಸಮುದಾಯದ ಬೆಂಬಲವಿದ್ದು, ಪಶ್ಚಿಮ ಉತ್ತರಪ್ರದೇಶದಲ್ಲಿ ಕುರ್ಮಿ ಸಮುದಾಯದ ಬೆಂಬಲ ಪಡೆದಿರುವ ಅಪ್ನಾ ದಳ ಪಕ್ಷ ಮತ್ತು ಪೂರ್ವಾಂಚಲ್ ಪ್ರದೇಶದಲ್ಲಿ ಪೀಸ್ ಪಾರ್ಟಿ ಪಕ್ಷ ಅಲ್ಪಸಂಖ್ಯಾತರ ಬೆಂಬಲ ಪಡೆದಿರುವುದರಿಂದ ಮಹಾಮೈತ್ರಿಕೂಟ ರಚನೆಗೆ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿದ್ದತೆ ನಡೆಸಿದ್ದಾರೆ ಎಂದು ಜೆಡಿಯು ಅನಾಮಧೇಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ