ಆರ್‌ಎಸ್ಎಸ್ ನಿರುಪಯುಕ್ತ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರಲು ಯತ್ನಿಸುತ್ತಿದೆ: ರಾಹುಲ್ ಗಾಂಧಿ

ಗುರುವಾರ, 18 ಫೆಬ್ರವರಿ 2016 (16:16 IST)
ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ನಿರುಪಯುಕ್ತ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರುವ ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ. 
 
ಜೆಎನ್‌ಯು ವಿವಾದಕ್ಕೆ ಸಂಬಂಧಿಸಿದಂತೆ ಇಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಭೇಟಿಯಾಗಿದ್ದ ಅವರು  ಆರ್‌ಎಸ್ಎಸ್ ತಾನು ಅನುಸರಿಸುತ್ತಿರುವ ಮೃತ ಸಿದ್ಧಾಂತವನ್ನು ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ. 
 
ರಾಷ್ಟ್ರಪತಿಯವರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ನರೇಂದ್ರ ಮೋದಿ ಸರ್ಕಾರ ಮತ್ತು ಆರ್‌ಎಸ್ಎಸ್ ವಿದ್ಯಾರ್ಥಿಗಳ ಧ್ವನಿಯನ್ನು ಉಡುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ. 
 
ಆರ್‌ಎಸ್ಎಸ್‌ನದು ಪ್ರಸ್ತುತವಲ್ಲದ ಸಿದ್ಧಾಂತ ಎಂದಿರುವ ರಾಹುಲ್, ದೇಶ ವಿದ್ಯಾರ್ಥಿಗಳಿಂದಾಗಿ ಏಳಿಗೆ ಹೊಂದುತ್ತದೆ. ಅವರ ಮೇಲೆ ಮೃತ ಸಿದ್ಧಾಂತವನ್ನು ಹೇರುವುದು ಅತಿದೊಡ್ಡ ಅಪರಾಧ ಎಂದು ಆರೋಪಿಸಿದ್ದಾರೆ.
 
ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವನ್ನು ಸಹ ಉಲ್ಲೇಖಿಸಿ ಮಾತನಾಡಿದ ಅವರು ಸರ್ಕಾರದ ವಿರುದ್ಧ ಧ್ವನಿ ಎತ್ತಲು ಪ್ರಯತ್ನಿಸಿದ್ದರಿಂದ ಪಿಹೆಚ್‌ಡಿ ವಿದ್ಯಾರ್ಥಿಯ ಧ್ವನಿಯನ್ನು ದಮನ ಮಾಡಲಾಯಿತು ಎಂದು ದೂರಿದ್ದಾರೆ. 
 
ಇದೇ ಸಂದರ್ಭದಲ್ಲಿ ಪಟಿಯಾಲ ಕೋರ್ಟ್ ಆವರಣದಲ್ಲಿ ನಡೆದ ಘಟನೆ ಬಗೆಗೆ ಕೂಡ ಕಿಡಿಕಾರಿದ ಅವರು, ಪತ್ರಕರ್ತರ ಮೇಲೆ ಯಾವ ರೀತಿಯಲ್ಲಿ ಹಲ್ಲೆ ನಡೆಸಲಾಯಿತು ಎಂಬುದನ್ನು ನಾವೆಲ್ಲ ನೋಡಿದ್ದಾರೆ. ಅದನ್ನು ತಡೆಯಲು ದೆಹಲಿ ಪೊಲೀಸರು ವಿಫಲರಾದರು. ಈ ಘಟನೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಕೆಡಿಸುತ್ತಿವೆ ಎಂದು ಅವರು ಗುಡುಗಿದ್ದಾರೆ.
 
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ನಾಯಕರಾದ  ಸಚಿನ್ ಪೈಲಟ್, ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮತ್ತು ಇತರರು ಅವರ ಜತೆಗಿದ್ದರು. 

ವೆಬ್ದುನಿಯಾವನ್ನು ಓದಿ