ಜೆಎನ್‌ಯು ವಿವಾದ: ರಾಹುಲ್, ಕೇಜ್ರಿವಾಲ್, ಯೆಚೂರಿ ಮೇಲೆ ದೇಶದ್ರೋಹ ಪ್ರಕರಣ

ಸೋಮವಾರ, 29 ಫೆಬ್ರವರಿ 2016 (15:47 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಿಪಿಐ(ಎಮ್) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ಒಬ್ಬತ್ತು ಜನರ ವಿರುದ್ಧ ಹೈದರಾಬಾದ್ ವಕೀಲರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 
 
ಜೆಎನ್‌ಯು ವಿವಾದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಸೀತಾರಾಮ್ ಯೆಚೂರಿ, ಸಿಪಿಐ ನಾಯಕ ಡಿ.ರಾಜಾ, ಕಾಂಗ್ರೆಸ್ ನಾಯಕರಾದ ಆನಂದ ಶರ್ಮಾ, ಅಜೇಯ್ ಮಾಕನ್, ಜೆಡಿ(ಯು)ವಕ್ತಾರ ಕೆ.ಸಿ.ತ್ಯಾಗಿ, ಜೆಎನ್‌ಯುಎಸ್‌ಯು ಅಧ್ಯಕ್ಷ ಕನ್ಹೈಯ್ಯಾ ಕುಮಾರ್, ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿದೆ. ವಕೀಲ ಜನಾರ್ಧನ್ ಗೌಡ್ ಈ ದೂರನ್ನು ಸಲ್ಲಿಸಿದ್ದರು. 
 
ಇದು ಕೋರ್ಟ್ ರೆಫರ್ ಮಾಡಿರುವ ಪ್ರಕರಣ. ಕೋರ್ಟ್ ನಿರ್ದೇಶನದ ಮೇರೆಗೆ ಐಪಿಸಿ ವಿಭಾಗ 124(A) (ದೇಶದ್ರೋಹ) ಅಡಿಯಲ್ಲಿ 9 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಸರೂರ್ ನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಎಸ್.ಲಿಂಗಯ್ಯ ಹೇಳಿದ್ದಾರೆ.  
 
ಪ್ರಕರಣದ ವಿಚಾರಣೆಯನ್ನು ಕೋರ್ಟ್ ಮಾರ್ಚ್ 4ಕ್ಕೆ ನಿಗದಿ ಪಡಿಸಿದೆ.
 
ಕನ್ಹೈಯ್ಯಾ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದಾರೆ ಎಂಬ ಅರಿವಿದ್ದು  ರಾಹುಲ್ ಮತ್ತು ಇತರ ನಾಯಕರು ಜೆಎನ್‌ಯು ಕ್ಯಾಂಪಸ್‌ಗೆ ಭೇಟಿ ನೀಡಿ ಆರೋಪಿಗಳನ್ನು ಬೆಂಬಲಿಸಿದರು. ಹೀಗಾಗಿ ಅವರು ಕೂಡ ದೇಶದ್ರೋಹ ಮಾಡಿದಂತಾಗುತ್ತದೆ ಎಂದು ಗೌಡ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
 
ಈಗಾಗಲೇ ದೆಹಲಿ ಪೊಲೀಸರಿಂದ ಬಂಧಿತರಾಗಿರುವ ಕನ್ಹೈಯ್ಯಾ ಮತ್ತು ಖಾಲಿದ್ ವಿರುದ್ಧ ಸಹ ಪ್ರಕರಣ ದಾಖಲಾಗಿದೆ. 
 
ಮೆಟ್ರೋಪಾಲಿಟಿನ್ ಮ್ಯಾಜಿಸ್ಟೇಟ್ ಕೋರ್ಟ್‌ನಲ್ಲಿ ಈ ಪ್ರಕರಣ ದಾಖಲಾಗಿದೆ. 

ವೆಬ್ದುನಿಯಾವನ್ನು ಓದಿ