ನಾವು ದೇಶದ್ರೋಹಿಗಳಲ್ಲ: ಜೆಎನ್‌ಯು ವಿವಾದದ ಆರೋಪಿ ವಿದ್ಯಾರ್ಥಿ ರಾಮಾನಾಗ

ಸೋಮವಾರ, 22 ಫೆಬ್ರವರಿ 2016 (12:23 IST)
ನವದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರು ಹುಡುಕುತ್ತಿದ್ದ ಐವರು ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ವಿವಿ ಆವರಣದಲ್ಲಿ ಪತ್ತೆಯಾಗಿದ್ದಾರೆ. 

ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ರೋಹಿತ್ ವೇಮುಲ ನೆನಪಿನಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ಉಮರ್ ಖಾಲಿದ್ ಸೇರಿದಂತೆ ಐವರು ವಿದ್ಯಾರ್ಥಿಗಳು ನಿನ್ನೆ ಸಂಜೆ ವಿಶ್ವವಿದ್ಯಾಲಯಕ್ಕೆ ಮರಳಿದ್ದಾರೆ. 
 
ಆರೋಪಿಗಳಲ್ಲಿ ಒಬ್ಬನಾದ ರಾಮಾನಾಗ ಮಾಧ್ಯಮಗಳೊಂದಿಗೆ ಮಾತನಾಡಿದ್ದು, 'ನಾವು ದೇಶದ್ರೋಹಿಗಳಲ್ಲ. ದೇಶವಿರೋಧಿ ಘೋಷಣೆ ಕೂಗಿಲ್ಲ. ಹೊರಗಿನಿಂದ ಬಂದ ಕೆಲವರು ದೇಶದ್ರೋಹಿ ಘೋಷಣೆಗಳನ್ನು ಕೂಗಿದರು. ನಾವು ಅದನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ನಾವು ಎಲ್ಲಿಯೂ ಓಡಿ ಹೋಗಿಲ್ಲ. ಫೆಬ್ರವರಿ 9ರ ಘಟನೆಯ ನಂತರ ನಮ್ಮನ್ನು ಉಗ್ರರಂತೆ ಕಾಣಲಾಯಿತು. ಅಷ್ಟೇ ಅಲ್ಲದೆ ಕನ್ಹೈಯ್ಯಾನನ್ನು ಬಂಧಿಸಲಾಯಿತು, ಅವನ ಮೇಲೆ ಹಲ್ಲೆ ಸಹ ನಡೆಯಿತು. ಇದರಿಂದ  ಭೀತಿಗೊಳಗಾದ ನಾವು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೇ ಸುರಕ್ಷಿತ ಪರಿಸರದಲ್ಲಿ ಇದ್ದೆವು. ಪರಿಸ್ಥಿತಿ ತಿಳಿಯಾದ ಮೇಲೆ ಮರಳುವುದು ನಮ್ಮ ಉದ್ದೇಶವಾಗಿತ್ತು. ಜೆಎನ್ ಯು ತೆಗೆದುಕೊಳ್ಳೋ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ನಮ್ಮನ್ನು ಪೊಲೀಸರಿಗೆ ಒಪ್ಪಿಸಿದರೆ ಬಂಧನಕ್ಕೊಳಪಡಲು ತಯಾರಿದ್ದೇವೆ ಎಂದು ಹೇಳಿದ್ದಾನೆ.
 
ದೇಶದ್ರೋಹಿ ಘೋಷಣೆ ಕೂಗಿದ ಆರೋಪ ಹೊತ್ತಿದ್ದ ಐವರು ವಿದ್ಯಾರ್ಥಿಗಳಾದ ಉಮರ್‌ ಖಾಲಿದ್‌, ಅನಿರ್ಬನ್‌ ಭಟ್ಟಾಚಾರ್ಯ, ರಾಮ ನಾಗ, ಅಶುತೋಷ್‌ ಕುಮಾರ್ ಹಾಗೂ ಅನಂತ್‌ ಪ್ರಕಾಶ್‌  ಜೆಎನ್‌ಯು ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹೈಯ್ಯಾ ಕುಮಾರ್ ಬಂಧನ ಬಳಿಕ ಪರಾರಿಯಾಗಿದ್ದರು. ಅದರಲ್ಲಿ ಉಮರ್ ಖಾಲಿದ್ ಪ್ರಮುಖ ಆರೋಪಿಯಾಗಿದ್ದು ಕಳೆದ ಡಿಸೆಂಬರ್ ತಿಂಗಳಿಂದ ಆತ 800 ಫೋನ್ ಕರೆ ಮಾಡಿದ್ದ ಕುರಿತು ಪೊಲೀಸರ ಬಳಿ ಸಾಕ್ಷ್ಯವಿದೆ. ಅದರಲ್ಲಿ ಹೆಚ್ಚಿನ ಕರೆಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿವೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ