ಜೆಎನ್‌ಯು ವಿವಾದ: ಅಮಿತ್ ಶಾ ವಿರುದ್ಧ ಯಾಕೆ ದೇಶದ್ರೋಹದ ಆರೋಪ ಹೊರಿಸುತ್ತಿಲ್ಲ ಎಂದ ಲಾಲು ಯಾದವ್

ಶುಕ್ರವಾರ, 19 ಫೆಬ್ರವರಿ 2016 (20:14 IST)
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಿ ಬಂಧಿಸಿರುವ ಕುರಿತಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
 
ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ ದಾಳಿ ರೂವಾರಿಯಾದ ಅಫ್ಜಲ್ ಗುರುನನ್ನು ಹುತಾತ್ಮ ಎಂದು ಘೋಷಿಸಿದ ಮೈತ್ರಿ ಪಕ್ಷವಾದ ಪಿಡಿಪಿಗೆ ದೇಶಭಕ್ತಿ ಪಾಠವನ್ನು ಕಲಿಸಲು ವಿಫಲವಾದ ಬಿಜೆಪಿ, ಕನ್ಹಯ್ಯಾ ಕುಮಾರ್‌ನನ್ನು ಬಂಧಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಒಂದು ವೇಳೆ, ಕನ್ಹಯ್ಯಾ ಕುಮಾರ್‌ ವಿರುದ್ಧ ದೇಶದ್ರೋಹದ ಆರೋಪ ಹೊರಿಸುವುದಾದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಯಾಕೆ ದೇಶದ್ರೋಹ ಆರೋಪ ಹೊರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
 
ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಅಮಿತ್ ಶಾ, ಒಂದು ವೇಳೆ, ಮಹಾಮೈತ್ರಿಕೂಟ ಜಯಗಳಿಸಿದಲ್ಲಿ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಯ ಆಧಾರದ ಮೇಲೆ ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಬಹುದು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ