ಗುರುವಾರ ಭಾರತ ರತ್ನ ಕಲಾಂ ಅಂತಿಮ ಸಂಸ್ಕಾರ

ಮಂಗಳವಾರ, 28 ಜುಲೈ 2015 (13:41 IST)
ಸೋಮವಾರ ನಮ್ಮನ್ನಗಲಿದ ಭಾರತ ರತ್ನ ಅಬ್ದುಲ್ ಕಲಾಂ ಅವರ ಅಂತಿಮ ಸಂಸ್ಕಾರ ನಾಡಿದ್ದು ಗುರುವಾರ ರಾಮೇಶ್ವರಂನಲ್ಲಿ ನಡೆಯಲಿದೆ.

ತಮ್ಮ ಚಿಕ್ಕಪ್ಪನ ಅಂತ್ಯಸಂಸ್ಕಾರವನ್ನು ಇಸ್ಲಾಂ ಧರ್ಮದ ಪದ್ಧತಿಯಂತೆ ಗುರುವಾರ 10.30ಕ್ಕೆ ನೆರವೇರಿಸಲಾಗುವುದು ಎಂದು ಕಲಾಂ ಹಿರಿಯ ಸಹೋದರನ ಮಗ
ಶೇಖ್ ಸಲೀಮ್ ಸ್ಪಷ್ಟಪಡಿಸಿದ್ದಾರೆ.
 
'ನಾಳೆ ಇಡೀ ದಿನ ರಾಮೇಶ್ವರಂನಲ್ಲಿ ಕಲಾಂ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಾಡಿದ್ದು ಧನುಷ್ಕೋಟಿ ರಸ್ತೆಯ ಸರ್ಕಾರಿ ಜಮೀನಿನಲ್ಲಿ ಅವರ ಅಂತ್ಯಸಂಸ್ಕಾರವನ್ನು ನಡೆಸಲಾಗುವುದು', ಎಂದು ಅವರು ತಿಳಿಸಿದ್ದಾರೆ. 
 
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, 6 ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಲೀಂ ಮಾಹಿತಿ ನೀಡಿದ್ದಾರೆ. 
 
ಇಂದು 12.15ಕ್ಕೆ  ವಾಯುಪಡೆಯ ವಿಶೇಷ ವಿಮಾನದಲ್ಲಿ ಗುವಾಹಟಿಯಿಂದ ನವದೆಹಲಿ ತರಲಾಯಿತು. ವಿಮಾನ ನಿಲ್ದಾಣಕ್ಕೆ ಶರೀರವನ್ನು ತರುತ್ತಿದ್ದಂತೆ ಭೂ ಸೇನೆ, ವಾಯುಸೇನೆ ಮತ್ತು, ನೌಕಾ ಸೇನೆಯ ಮುಖ್ಯಸ್ಥರು, ಸೇನಾಪಡೆ ಅವರಿಗೆ ಗೌರವ ವಂದನೆಯನ್ನು ಸಲ್ಲಿಸಿದರು.
 
ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮೋದಿ, ರಕ್ಷಣಾ ಸಚಿವರಾದ ಪರಿಕ್ಕರ್, ದೆಹಲಿ ಸಿಎಂ ಕೇಜ್ರಿವಾಲ್, ಉಪರಾಜ್ಯಪಾಲ, ನಜೀಬ್ ಜಂಗ್ ಸೇರಿದಂತೆ ಪ್ರಮುಖ ಗಣ್ಯರು ಅಗಲಿದ ಧೀಮಂತನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. 
 
ಇಲ್ಲಿಂದ ಪಾರ್ಥಿವ ಶರೀರವನ್ನು ನಂ10, ರಾಜಾಜಿ  ಮಾರ್ಗದಲ್ಲಿರುವ ನಿವಾಸಕ್ಕೆ ಕೊಂಡೊಯ್ಯಲಾಗುತ್ತಿದೆ. ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕಿಡಲಾಗುವುದು. 
 
ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಅವರ ಪಾರ್ಥಿವ ಶರೀರವನ್ನು ರಾಮೇಶ್ವರಂಗೆ ಕೊಂಡೊಯ್ಯಲಾಗುವುದು.

ವೆಬ್ದುನಿಯಾವನ್ನು ಓದಿ