ಗೊಂದಲ ನಿವಾರಣೆ: ಹುಟ್ಟೂರು ರಾಮೇಶ್ವರಂನಲ್ಲಿ ಕಲಾಂ ಅಂತ್ಯಸಂಸ್ಕಾರ

ಮಂಗಳವಾರ, 28 ಜುಲೈ 2015 (11:25 IST)
ಮೇಘಾಲಯದ ಶಿಲಾಂಗ್‌ನ ಐಐಎಂನಲ್ಲಿ ನಿನ್ನೆ ಸಂಜೆ ಉಪನ್ಯಾಸ ನೀಡುತ್ತಿದ್ದಾಗ ಕುಸಿದು ಬಿದ್ದು ಕೊನೆಯುಸಿರೆಳೆದ ಭಾರತದ ಹೆಮ್ಮೆಯ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಅಂತ್ಯ ಸಂಸ್ಕಾರ ವಿಚಾರದಲ್ಲಿದ್ದ ಗೊಂದಲ ನಿವಾರಣೆಯಾಗಿದೆ. ಅವರ ಅಂತ್ಯಸಂಸ್ಕಾರವನ್ನು ಹುಟ್ಟೂರು ರಾಮೇಶ್ವರಂನಲ್ಲೇ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. 

ಕಲಾಂ ಅಂತ್ಯ ಸಂಸ್ಕಾರವನ್ನು ದೆಹಲಿಯಲ್ಲಿ ನಡೆಸಬೇಕೋ ಅಥವಾ ಅವರ ಹುಟ್ಟೂರಾದ ತಮಿಳುನಾಡಿನ ರಾಮೇಶ್ವರಂನಲ್ಲಿ ನಡೆಸುವುದೋ ಎಂಬುದು ಗೊಂದಲವನ್ನು ಸೃಷ್ಟಿಸಿತ್ತು. ಈ ಕುರಿತು ನಿರ್ಧರಿಸಲು ಕೇಂದ್ರ ಸರ್ಕಾರ ಬೆಳಿಗ್ಗೆ 10.30ಕ್ಕೆ ತುರ್ತು ಸಂಪುಟ ಸಭೆಯನ್ನು  ಕರೆದಿತ್ತು. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಬಳಿಕ ಅವರ ಕುಟುಂಬಸ್ಥರ ಒತ್ತಾಯವನ್ನು ಪರಿಗಣಿಸಿ ರಾಮೇಶ್ವರಂನಲ್ಲೇ ಅವರ ಅಂತ್ಯಸಂಸ್ಕಾರವನ್ನು ನಡೆಸುವುದೆಂದು ತೀರ್ಮಾನಿಸಲಾಗಿದೆ.
 
ನವದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಕಲಾಂ ನಿವಾಸದಲ್ಲಿ 3 ಗಂಟೆಯಿಂದ 6 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಅಭಿಮಾನಿಗಳ ದರ್ಶನಕ್ಕೆ ಇಡಲಾಗುವುದು ಎಂದು ರಕ್ಷಣಾ ಇಲಾಖೆ ಪ್ರಕಟಿಸಿದೆ. 
 
ಕಲಾಂ ಅವರ ಅಂತಿಮ ದರ್ಶನ ಪಡೆದುಕೊಳ್ಳಲು ಸಾರ್ವಜನಿಕರು ಅವರ ದೆಹಲಿ ನಿವಾಸದ ಎದುರು ಜಮಾಯಿಸುತ್ತಿದ್ದು, ನಿವಾಸದ ಸುತ್ತಲೂ ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ.

ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಅವರ ಪಾರ್ಥಿವ ಶರೀರವನ್ನು ರಾಮೇಶ್ವರಂಗೆ ಕೊಂಡೊಯ್ಯಲಾಗುವುದು. ನಾಳೆ ಅವರ ಅಂತ್ಯಸಂಸ್ಕಾರವನ್ನು ನಡೆಸಲಾಗುವುದು ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ಮಂತ್ರಿಗಳು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ. 
 
ಅವರ ಹುಟ್ಟೂರು ತಮಿಳುನಾಡಿನ ರಾಮೇಶ್ವರಂನಲ್ಲಿಯೇ ಅಂತ್ಯಸಂಸ್ಕಾರವನ್ನು ನಡೆಸುವ ಬಯಕೆ ಅವರ ಕುಟುಂಬ ವರ್ಗದ್ದಾಗಿದೆ. ಅವರ ಕುಟುಂಬ ಸದಸ್ಯರ್ಯಾರು ದೆಹಲಿಗೆ ತೆರಳಿಲ್ಲ.  

ವೆಬ್ದುನಿಯಾವನ್ನು ಓದಿ