ಹಳಿ ತಪ್ಪಿದ ಬೆಂಗಳೂರು- ಕನ್ಯಾಕುಮಾರಿ ರೈಲು

ಶುಕ್ರವಾರ, 5 ಫೆಬ್ರವರಿ 2016 (08:50 IST)
ಬೆಂಗಳೂರು- ಕನ್ಯಾಕುಮಾರಿ ಐಲ್ಯಾಂಡ್‌ ಎಕ್ಸ್‌‌ಪ್ರೆಸ್‌‌ ತಮಿಳುನಾಡಿನ ವೇಲೂರು ಜಿಲ್ಲೆಯ ಜೋಲಾರಪೇಟೆ ಬಳಿ ಇಂದು ನಸುಕಿನ ಜಾವ ಹಳಿ ತಪ್ಪಿದ್ದು ಘಟನೆಯಲ್ಲಿ 13 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ರೈಲು ಇಲಾಖೆ ಮೂಲಗಳು ತಿಳಿಸಿವೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಬೆಂಗಳೂರಿಗೆ ರವಾನಿಸಲಾಗಿದೆ. 

ಬೆಳಗ್ಗೆ 5.30 ಸುಮಾರಿಗೆ ಘಟನೆ ನಡೆದಿದ್ದು,4 ಬೋಗಿಗಳು ಹಳಿ ತಪ್ಪಿವೆ. ಒಂದು ಬೋಗಿ ಪಲ್ಟಿಯಾಗಿದ್ದು ಘಟನೆಯಿಂದ ಬೆಂಗಳೂರು-ಚೆನ್ನೈ ರೈಲು ಮಾರ್ಗದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿವೆ. ಮಾರ್ಗಗಳು ಸಂಚಾರಕ್ಕೆ ಮುಕ್ತವಾಗದ ಹಿನ್ನೆಲೆಯಲ್ಲಿ ಚೆನ್ನೈ -ಬೆಂಗಳೂರು ಮಾರ್ಗದ ಎರಡು ರೈಲುಗಳನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ತೆರಳಲೆಂದು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
 
ಬೆಂಗಳೂರು- ಚೆನ್ನೈ ನಡುವೆ ಸಂಚರಿಸುವ ಬೃಂದಾವನ ಎಕ್ಸಪ್ರೆಸ್ ಮತ್ತು ಡಬಲ್ ಡೆಕ್ಕರ್ ರೈಲುಗಳು ಇಂದು ಸಂಚರಿಸುತ್ತಿಲ್ಲ. 
 
ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. 

ವೆಬ್ದುನಿಯಾವನ್ನು ಓದಿ