ಕರೀನಾ ಧರ್ಮ ಪರಿವರ್ತನೆ ಮಾಡಿಲ್ಲ, ಮಾಡುವುದು ಇಲ್ಲ : ಸೈಫ್ ಅಲಿ ಖಾನ್

ಶುಕ್ರವಾರ, 30 ಜನವರಿ 2015 (11:10 IST)
ಸೈಫ್ ಅಲಿಖಾನ್‌ನನ್ನು ವಿವಾಹವಾದಾಗಿನಿಂದ ಬಾಲಿವುಡ್ ಬೆಡಗಿ ಕರೀನಾ ಕಪೂರ್‌ ಪದೇ ಪದೇ ಕೆಲವು ಹಿಂದೂ ಸಂಘಟನೆಗಳ ವಿರೋಧವನ್ನೆದುರಿಸುತ್ತಿದ್ದಾರೆ. ಇವರ ಭಾವಚಿತ್ರವನ್ನು ಲವ್ ಜಿಹಾದ್ ಬಿಂಬಿಸುವ ಪೋಸ್ಟರ್‌ಗು ಕೂಡ ಬಳಸಿಕೊಳ್ಳಲಾಗಿತ್ತು. 
 
ಲವ್ ಜಿಹಾದ್ ಸಂಬಂಧಿಸಿದಂತೆ ತಮ್ಮ ಪತ್ನಿಯನ್ನು ಗುರಿಯಾಗಿಸಿ ಹಿಂದೂ ಸಂಘಟನೆಗಳು ನಡೆದುಕೊಳ್ಳುತ್ತಿರುವ ರೀತಿ ಕರೀನಾ ಪತಿ  ಸೈಫ್ ಅಲಿಖಾನ್‌ ಅವರ ನಿದ್ದೆಗೆಡಿಸಿದೆ. ಆದ್ದರಿಂದ ಕರೀನಾಳನ್ನು ನಾನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿಲ್ಲ ಎಂದು  ಅವರು ಸ್ಪಷ್ಟನೆ ನೀಡಿದ್ದಾರೆ.
 
"ಆಕೆ ಮತಾಂತರಗೊಂಡಿದ್ದಾಳೆ ಎಂದು ಜನರು ಹೇಳುತ್ತಿದ್ದಾರೆ. ಆದರೆ ಹಾಗೇನೂ ನಡೆದಿಲ್ಲ", ಎಂದು ಸೈಫ್ ಹೇಳಿದ್ದಾರೆ. 
 
"ಲವ್ ಜಿಹಾದ್ ಹೆಸರಿನಲ್ಲಿ ಇಷ್ಟೊಂದು ಗಲಾಟೆ ನಡೆಯುತ್ತಿ ವಿಷಾದನೀಯ. ಈ ಆರೋಪಗಳು ನಮ್ಮನ್ನು ಭಾವನಾತ್ಮಕವಾಗಿ, ಬೌದ್ಧಿಕವಾಗಿ ಮತ್ತು ಸಾಮಾಜಿಕವಾಗಿ ಘಾಸಿಗೊಳಿಸಿದೆ. ನಮ್ಮ ನಡುವೆ ಜಾತಿಧರ್ಮಗಳ ಗೋಡೆ ಇಲ್ಲ. ಕೆಲವು ಹಿಂದೂ ಸಂಘಟನೆಗಳು ಕರೀನಾಳನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಿಕೊಂಡಿವೆ. ನಾನಾಗಲಿ ನನ್ನ ಕುಟುಂಬದವರಾಗಲಿ ಕರೀನಾಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿಲ್ಲ ಮತ್ತು ಭವಿಷ್ಯದಲ್ಲಿಯೂ ಅಂತಹ ಕಾರ್ಯವನ್ನು ಎಸಗುವುದಿಲ್ಲ. ನಮ್ಮ ಮನೆಯಲ್ಲಿ ಎಲ್ಲರಿಗೂ ತಮಗಿಷ್ಟವಾದ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯ ಇದೆ", ಎಂದಿದ್ದಾರೆ ಸೈಫ್. 
 
"ಕರೀನಾಳನ್ನು ಆಕೆಯ ಕೆಲಸಕ್ಕೆ ಸಂಬಂಧಿಸಿದಂತೆ ಮಾತ್ರ ಗುರುತಿಸಬೇಕು. ಸಮಾಜಕ್ಕೆ ಮತ್ತು ಸಿನಿಮಾ ರಂಗಕ್ಕೆ ಆಕೆ ನೀಡಿರುವ ಕೊಡುಗೆಗೆ ದೇಶ ಹೆಮ್ಮೆ ಪಡಬೇಕು. ಆಕೆ ಮಹಿಳಾ ಹಕ್ಕು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದಾಳೆ. ಆಕೆಯನ್ನು ಪ್ರಬಲ ಮನಸ್ಸಿನ, ಆಧುನಿಕ ವ್ಯಕ್ತಿಯಾಗಿ ನೋಡಬೇಕು", ಎಂದು ಸೈಫ್ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ