ಕಾರ್ಗಿಲ್ ವಿಜಯೋತ್ಸವ: ಸ್ಮರಿಸೋಣ ಅವರ ತ್ಯಾಗ, ಬಲಿದಾನವನ್ನಾ!

ಶನಿವಾರ, 26 ಜುಲೈ 2014 (10:36 IST)
ಒಂದು ಕಡೆ ಗುಂಡಿನ ಸುರಿಮಳೆ..... ಇನ್ನೊಂದು ಕಡೆ ಕಡಿದಾದ ಆಯ ಕಟ್ಟಿನ ಸ್ಥಳ...... ಮತ್ತೊಂದು ಕಡೆ ಮೈ ಕೊರೆವ ಚಳಿ........! ಮಗದೊಂದು ಕಡೆ ರಕ್ತದ ಮಡುವಿನಲ್ಲಿ ಬಿದ್ದ ರಾಶಿ ರಾಶಿ ಹೆಣಗಳು...... ಅಬ್ಬಾ !! ಎಂಥಹ ಭಯಾನಕ ಸನ್ನಿವೇಶ...!!!


ಹೌದು, ಇದು ಕಾರ್ಗಿಲ್ ಯುದ್ದದ ರಣರಂಗದ ಚಿತ್ರಣ. ಪವಿತ್ರ ಸ್ಥಳವನ್ನು ಅಪವಿತ್ರ ಮಾಡಲು ಹೊರಟ ಪಾತಕಿಗಳ ಹುಟ್ಟಡಗಿಸಿ ಇಂದಿಗೆ ಬರೋಬ್ಬರಿ 15 ವರ್ಷಗಳು ಸಂದಿವೆ. 
 
ಸಣ್ಣ ಬುದ್ಧಿಯ ಪಾಕಿಸ್ತಾನದಿಂದ ಹೆಚ್ಚೇನನ್ನೂ ಅಪೇಕ್ಷಿಸುವಂತಿಲ್ಲ . 70ರ ದಶಕದಲ್ಲಿ ದಂಡೆತ್ತಿ ಬಂದಾಗ ಭಾರತ ಅದರ ಮಗ್ಗಲು ಮುರಿದು ಉರುಳಿಸಿತ್ತು. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂಥ ಜಾತಿ ಅದರದ್ದು. ಅಂದಿನಿಂದ ನಿರಂತರವಾಗಿ ಪಾಕಿಸ್ತಾನ ಕ್ಯಾತೆ ತೆಗೆಯುತ್ತಲೇ ಬಂದಿತ್ತು. ಆದರೆ ಶಾಂತಿಪ್ರಿಯ ಭಾರತ ಶಾಂತಿ ಶಾಂತಿ ಎಂದು ಪಠಿಸುತ್ತಾ ಬಂದಿತ್ತು.
 
ಇವೆಲ್ಲದರ ನಡುವೆ 1999ರ ಮೇ 3ರಂದು ಪಾಕಿಸ್ತಾನ ಯುದ್ದಕ್ಕೆ ತಯಾರಿ ಮಾಡಿಕೊಂಡು, ಭಾರತದ ನಿಯಂತ್ರಣ ರೇಖೆಯನ್ನು ದಾಟಲು ಪ್ರಯತ್ನಿಸಿತು. ಭಾರತದ ಮುಕುಟದ ಮಣಿಗೆ ರಕ್ತದ ಅಭಿಷೇಕ ಮಾಡಲು ಕ್ರೂರಿಗಳು ಸನ್ನದ್ಧರಾಗಿ ನಿಂತಿದ್ದರು. ಶಕ್ತಶಾಲಿ ಬಂಕರುಗಳನ್ನು ನಿರ್ಮಿಸಿಕೊಂಡು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತೆಕ್ಕೆಯಲ್ಲಿ ಇಟ್ಟುಕೊಂಡು ಹೊಂಚುಹಾಕುತ್ತಿದ್ದರು.
 
ಭಾರತೀಯ ಬೇಹುಗಾರಿಕಾ ಅಧಿಕಾರಿಗಳು ಅವರ ತಂತ್ರವನ್ನು ಅರಿಯುವಲ್ಲಿ ವಿಫಲರಾಗಿದ್ದರು. ಆದರೂ `ಪಾಕಿ ಸೈನಿಕರು ಭಾರತದ ಗಡಿಯೊಳಗೆ ನುಗ್ಗಿದ್ದಾರೆ' ಎನ್ನುವ ವಿಷಯ ಒಬ್ಬ ಕುರಿ ಕಾಯುವ ಕುರುಬನಿಂದ ಅಧಿಕಾರಿಗಳಿಗೆ ತಿಳಿಯಿತು. ಇದನ್ನು ಲಘುವಾಗಿ ಪರಿಗಣಿಸಿದ ಭಾರತ, ಚಿಕ್ಕದೊಂದು ಸೇನಾ ಪಡೆಯನ್ನು ಗಿರಿ ಕಂದಕಕ್ಕೆ ರವಾನಿಸಿತು. ಅಲ್ಲಿ ನಡೆದಿದ್ದು ಮಾತ್ರ ಘೋರ ಅನಾಹುತ......! ಅಷ್ಟೇ ವಿಪರ್ಯಾಸವೂ ಕೂಡ.
 
ಕಾರಣ, ಆಧುನಿಕ ಮತ್ತು ಪೂರ್ವ ತಯಾರಿ ಯೋಜನೆಗಳನ್ನು ದುಷ್ಟರು ಮೊದಲೇ ಹಾಕಿಕೊಂಡಿದ್ದರು. 1800 ಅಡಿ ಎತ್ತರದಲ್ಲಿ ಪಾಕಿ ಸೈನ್ಯ ನಮ್ಮ ಭಾರತದ ಸೈನಿಕರಿಗಾಗಿ ಹೊಂಚು ಹಾಕಿ ಕಾಯುತ್ತ ಕುಳಿತಿತ್ತು. ಇದರ ಅರಿವು ಇಲ್ಲದ ಭಾರತೀಯ ಜವಾನರು, ಅವರ ಗುಂಡಿನ ಮಳೆಯಲ್ಲಿ ಪ್ರಾಣ ತೆತ್ತರು. 60 ಸೈನಿಕರಿದ್ದ ಆ ಚಿಕ್ಕ ತುಕಡಿಯಲ್ಲಿ, ಅವರಿಗೆ ಹೋರಾಡಲು ರೈಫಲ್ ಮತ್ತು ಮಶೀನ್ ಗನ್ ಮಾತ್ರ ನೀಡಲಾಗಿತ್ತು. ತುಕಡಿಯಲ್ಲಿದ್ದ ಎಲ್ಲರೂ ಹತ್ಯೆಯಾದ ವಿಷಯ ತಿಳಿದ ಭಾರತ ಅಕ್ಷರಶಃ ದಿಗ್ಭ್ರಾಂತವಾಯಿತು......!
 
15 ರಿಂದ 18 ಸಾವಿರ ಎತ್ತರದ ಪರ್ವದಲ್ಲಿ ಅಡಗಿರುವ ಪಾಕಿ ಸೈನಿಕರಿಗೆ ಭಾರತೀಯ ಸೈನಿಕರು ಸ್ಪಷ್ಟವಾಗಿ ಕಾಣುತ್ತಿದ್ದರು. ಭಾರತದ ಮೇಲೆ ದಾಳಿ ಮಾಡಿ ಕೆಲವು ಭೂ ಪ್ರದೇಶಗಳನ್ನು ವಶ ಪಡಿಸಿಕೊಳ್ಳಬೇಕೆಂದು ಸರ್ವಸನ್ನದ್ಧರಾಗಿದ್ದರವರು. ಆ ಸಂದರ್ಭದಲ್ಲಿ ಪಾಕಿಸ್ತಾನದ ಈ ವಿಚಿತ್ರ ನಡವಳಿಕೆ ಅಮೆರಿಕಾ, ಇಂಗ್ಲೆಂಡ್ ರಾಷ್ಟ್ರಗಳನ್ನು ಸಹ ವಿಚಲಿತರನ್ನಾಗಿ ಮಾಡಿದ್ದು ಸುಳ್ಳಲ್ಲ.

ದುಷ್ಟರನ್ನು ಹಿಮ್ಮೆಟ್ಟಿಸಲು ಭಾರತ ಕಾರ್ಯಾಚರಣೆಯನ್ನು ಎಚ್ಚರಿಕೆಯಿಂದ ನಡೆಸಿತು. ಭೂಸೇನೆ ಜೊತೆ ವಾಯುಪಡೆ ಕೈಜೋಡಿಸಿತು. ಎತ್ತರ ಪ್ರದೇಶದಲ್ಲಿ ಹೇಡಿಗಳ ಹಾಗೆ ಅಡಗಿ ಕುಳಿತು ಗುಂಡಿನ ಮಳೆ ಸುರಿಸುತ್ತಿರುವ ನೀಚರನ್ನು ಓಡಿಸಲು ವಾಯುಪಡೆ ಸನ್ನದ್ಧವಾಯಿತು. ಅಲ್ಲದೆ, ಆಯಾ ಕಟ್ಟಿನ ಸ್ಥಳಗಳಲ್ಲಿ ಬೀಡು ಬಿಟ್ಟು ತಮ್ಮ ಪ್ರಾಬಲ್ಯ ಸಾಧಿಸಿದ ಪಾಕಿ ಸೈನಿಕರನ್ನು ಭೂಸೇನಿಯಿಂದ ಹಿಮ್ಮೆಟ್ಟಿಸುವುದು ಅಸಾಧ್ಯವಾಗಿತ್ತು. ಹಾಗಾಗಿ ವಾಯುಪಡೆ ಹೋರಾಟದಲ್ಲಿ ಜೊತೆಯಾಯಿತು. ಮೈ ಕೊರೆಯುವ ಚಳಿ, ಆಯ ತಪ್ಪಿದರೆ ಪ್ರಾಣವೇ ಹಾರಿ ಹೋಗುವ ಕಡಿದಾದ ಪ್ರದೇಶ, ದುರ್ಗಮವಾದ ಹಾದಿ, ಗುಂಡಿನ ಸುರಿಮಳೆ ಇವುಗಳ ನಡುವೆಯೆ ಕೆಚ್ಚೆದೆಯಿಂದ ಹೋರಾಡಿ, ಗ್ರಾಸ್ ಸೆಕ್ಟರ್ ಪ್ರದೇಶವನ್ನು ತೆಕ್ಕೆಗೆ ತೆಗೆದುಕೊಂಡು ತ್ರಿವರ್ಣ ಧ್ವಜವನ್ನು ಹಾರಿಸುವುದೇ ನಮ್ಮ ಜವಾನರ ಏಕೈಕ ಗುರಿಯಾಗಿತ್ತು. 

1600 ಅಡಿ ಎತ್ತರದ ಕಾರ್ಗಿಲ್ ಪರ್ವತದಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಬೆಳೆಯುವದಿಲ್ಲ. ಅಂತಹ ಸ್ಥಳದಲ್ಲಿ ತಮ್ಮ ಪ್ರಾಣವನ್ನು ತೆತ್ತು ಜಯ ತಂದು ಕೋಡುವುದು ಭಾರತೀಯ ಸೈನಿಕರ ಬಯಕೆಯಾಗಿತ್ತು. ಭಾರತಾಂಬೆಯ ಋಣ ತೀರಿಸಲು ತಕ್ಕ ಸಂದರ್ಭ ಎಂದು ತೀಳಿದು ಕೆಚ್ಚೆದೆಯಿಂದ ಹೋರಾಡಿದರು. ಪಾಕಿಯ ಅರ್ಧದಷ್ಟು ಸೈನಿಕರು ಇಲ್ಲೆ ಮರಣ ಹೊಂದಿದರು. ಇದನ್ನು ವಶಪಡಿಸಿಕೊಂಡ ನಂತರ ಯುದ್ದದ ಚಿತ್ರಣವೇ ಬದಲಾಯಿತು.
 
1999 ಜುಲೈ 26ರಂದು ಭಾರತೀಯ ಸೈನ್ಯ ಅಳಿದುಳಿದ ಪಾಕಿ ಸೈನಿಕರನ್ನು ಹೊಡೆದೋಡಿಸಿತ್ತು. ದಿಗ್ವಿಜಯದ ಸಂಕೇತವಾಗಿ ತ್ರಿವರ್ಣ ಧ್ವಜವನ್ನು ನೆಟ್ಟು ಸಂಭ್ರಮಿಸಿತು. ಭಾರತ ಸೇನೆಯನ್ನು ವಾಪಸ್ ಕರೆಸಿ ವಿಜಯೋತ್ಸವ ಆಚರಿಸಿತು.
 
ತನ್ನ ಸೈನಿಕರ ಮೃತ ದೇಹವನ್ನು ಒಯ್ಯಲು ಪಾಕಿಸ್ತಾನ ಒಪ್ಪದಿದ್ದಾಗ, ಭಾರತೀಯ ಸೈನಿಕರೆ ಮುಸ್ಲಿಂ ವಿಧಿ ವಿಧಾನಗಳ ಮೂಲಕ ಅವರ ಸಾವಿರಾರು ಮೃತ ದೇಹಗಳನ್ನು ಮಣ್ಣುಮಾಡಿದರು. ಇದರಿಂದ ಪ್ರಪಂಚವೇ ನಮ್ಮ ಜವಾನರನ್ನು ಹಾಡಿ ಹೊಗಳಿತ್ತು. ಭಾರತೀಯ ಸೈನಿಕರ ಮೃತ ದೇಹಗಳನ್ನು ಅವರರವರ ಮನೆಗೆ ಸಾಗಿಸುವ ವ್ಯವಸ್ಥೆಯನ್ನು ಸರಕಾರ ಅಚ್ಚುಕಟ್ಟಾಗಿ ಮಾಡಿತು.
 
ವೀರ ಯೋಧರ ಮರಣ, ಕೆಚ್ಚೆದೆಯ ಹೋರಾಟ ಒಂದು ಯಶಸ್ವಿ ಯಶೋಗಾಥೆಯಾಗಿದೆ. ವೀರ ಮರಣವನ್ನಪ್ಪಿದ ಯೋಧನಿಗೆ ಕಂಬನಿಯನ್ನೇನೊ ಮಿಡಿದಿದ್ದೇವೆ. ಆದರೆ, ಬಾರದ ಲೋಕಕ್ಕೆ ಹೋಗಿರುವ ಮಗ ಇನ್ನೆಂದೂ ಬರಲಾರ ಎಂದು ಗೊತ್ತಿದ್ದರೂ `ಹೋಗಿ ಬರುತ್ತೇನೆಂದು ಹೇಳಿ ಹೋದ ಮಗ ಇನ್ನೂ ಬಂದಿಲ್ಲ' ಎಂದು ಎಷ್ಟೋ ಅಮ್ಮಂದಿರು ತಮ್ಮ ಕರುಳ ಕುಡಿಗಾಗಿ ಈಗಲೂ ಕಾಯುತ್ತಿದ್ದಾರೆ... 
 
ಇಂದು 15 ನೇ ಕಾರ್ಗಿಲ್ ವಿಜಯೋತ್ಸವ. ನಮ್ಮವರ ರಕ್ತವಿನ್ನು ಹಿಮಾಲಯದ ಹಿಮದಲ್ಲಿ ಹೆಪ್ಪುಗಟ್ಟಿದೆ. ನಮಗಾಗಿ ನೆತ್ತರ ಸುರಿಸಿದವರನ್ನು ಇಂದಾದರೂ ನೆನಪಿಸುವ ದೊಡ್ಡತನವನ್ನು ಮಾಡೋಣ...
 
ಕ್ಷುಲ್ಲಕ ಸಂಗತಿಗಳಲ್ಲಿ, ರೀಲ್ ಲೈಫಿನ ಹೀರೋಗಳನ್ನು ಹಂಬಲಿಯುತ್ತಾ ಕಾಲ ಕಳೆಯುವ ಮನಸ್ಸನ್ನೊಮ್ಮೆ ರೀಯಲ್ ಹೀರೋಗಳತ್ತ ಜಾರಿಸೋಣ...... ದೇಶಭಕ್ತಿಯ ಬಿಸಿ ಬಿಸಿ ನೆತ್ತರ ಚೆಲ್ಲಿ ಮಾತೃಭೂಮಿಗಾಗಿ ಜೀವ ತೆತ್ತ ಅಮೂಲ್ಯ, ಪದಗಳಿಲ್ಲದ ತ್ಯಾಗವನ್ನೊಮ್ಮೆ ತುಂಬು ಹೃದಯದಿಂದ ಸ್ಮರಿಸಿ, ತಲೆಬಗ್ಗಿಸಿ ನಮಿಸೋಣ. ......ಜರಾ ಯಾದ್ ಕರೋ ಕುರಬಾನಿ.....

ವೆಬ್ದುನಿಯಾವನ್ನು ಓದಿ