ದೇಶವಾಚರಿಸುತ್ತಿದೆ 15 ನೇ ಕಾರ್ಗಿಲ್ ವಿಜಯೋತ್ಸವ: ಅಭಿಮಾನ ಮತ್ತು ನೋವು ತುಂಬಿದ ಅಮರ ಜವಾನರ ನೆನಪು

ಶನಿವಾರ, 26 ಜುಲೈ 2014 (12:28 IST)
ಇಂದು 15 ನೇ ಕಾರ್ಗಿಲ್ ವಿಜಯೋತ್ಸವ ದಿನ. ಮೈ ಕೊರೆವ ಚಳಿಯಲ್ಲಿ, ರಕ್ತ ಹೆಪ್ಪುಗಟ್ಟಿಸುವ ಹಿಮದ ರಾಶಿಯ ನಡುವೆ ವೀರಾವೇಶದಿಂದ ಹೋರಾಡಿ, ಮಾತೃಭೂಮಿಗಾಗಿ ಮಣ್ಣಲ್ಲಿ ಮಣ್ಣಾದ ಸಾವಿರಾರು ಸೈನಿಕರು ನಮಗೆ ನೀಡಿ ಹೋದ ವಿಜಯದ ದಿನ. ದೇಶವಿದನ್ನು  ಅಭಿಮಾನ ಮತ್ತು ನೋವಿನೊಂದಿಗೆ ಆಚರಿಸುತ್ತಿದೆ. ನಮಗಾಗಿ ಮಡಿದವರ ನೆನಸಿ ತುಂಬಿ ಬರುವ ಕಣ್ಣೀರಿನ ನಡುವೆ ಅವರ ತ್ಯಾಗ, ಧೈರ್ಯ, ಸಾಹಸ, ಬಲಿದಾನದ ನೆನೆದು ಹೃದಯ ಹೆಮ್ಮೆಯಿಂದ ಬೀಗುತ್ತದೆ.

ನವದೆಹಲಿಯಲ್ಲಿನ ಇಂಡಿಯಾ ಗೇಟಿನ ಬಳಿ ಇರುವ ಅಮರ್ ಜವಾನ ಜ್ಯೋತಿಗೆ ವಂದನೆ ಸಲ್ಲಿಸುವುದರ ಮೂಲಕ ರಕ್ಷಣಾ ಮಂತ್ರಿ ಅರುಣ್ ಜೆಟ್ಲಿ  ಹುತಾತ್ಮ ಸೈನಿಕರನ್ನು ಸ್ಮರಿಸಿಕೊಂಡು, ಭಾರತ ಸರಕಾರದ ವತಿಯಿಂದ ವೀರ ಯೋಧರಿಗೆ ಗೌರವ ಸಲ್ಲಿಸಿದರು. 
 
ಸೇನಾ ಮುಖ್ಯಸ್ಥ ಬಿಕ್ರಮ್ ಸಿಂಗ್, ನೌಕಾದಳದ ಮುಖ್ಯಸ್ಥ ರಾಬಿನ್ ಧೋವನ್ ಮತ್ತು ವಾಯುಸೇನೆ ವರಿಷ್ಠ ಅರುಪ್ ರಹಾ,  ಮತ್ತೀತರ ಗಣ್ಯರು  ಕೂಡ ವೀರ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು. 
 
ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಸೈನಿಕರ ಕುಟುಂಬದವರು ಕೂಡ ಪ್ರತಿವರ್ಷದ ಈ ದಿನ ಈ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ. ತಮ್ಮವರನ್ನು ಅಭಿಮಾನದಿಂದ ಸ್ಮರಿಸಿಕೊಳ್ಳುವ ಅವರ ಕಣ್ಣಿಂದ ಹೇಳಲಾಗದ ನೋವು ಕಣ್ಣೀರಾಗಿ ಹರಿಯುತ್ತದೆ. 
 
"ಈ ದಿನ ಮತ್ತು ಈ ಸ್ಥಳ ದೇಶಕ್ಕಾಗಿ ಬಲಿದಾನ ಮಾಡಿದ ಅಮರ ಯೋಧರನ್ನು ನೆನಪಿಸುತ್ತದೆ.  ನನ್ನ ಮಗ ಕೂಡ ಅವರಲ್ಲೊಬ್ಬ. ಮಗನನ್ನು ಕಳೆದುಕೊಂಡ ಬಗ್ಗೆ ಅಪಾರ ನೋವಿದೆ. ಆದರೆ ಆತ ತಾಯ್ನೆಲಕ್ಕಾಗಿ ಜೀವವರ್ಪಿಸಿದ ಎಂಬುದನ್ನು ನೆನೆದು ಗರ್ವವೆನಿಸುತ್ತದೆ" ಎಂದು ಕಣ್ಣೀರೊರೆಸಿಕೊಂಡರು ಅಮರ ಯೋಧ ಕ್ಯಾಪ್ಟನ್ ವಿಜಯಂತ್ ಥಾಫರ್ ತಂದೆ ಕರ್ನಲ್ ವಿ ಎನ್ ಥಾಪರ್.
 
ಪಾಕಿಸ್ತಾನದ ಅಧಿಕಪ್ರಸಂಗಿತನಕ್ಕೆ ಚಾಚಿಯೇಟು ನೀಡಿ 15 ವರ್ಷಗಳೇ ಸಂದವು. ಆದರೆ ತಿಳಿಗೇಡಿ ಪಾಕ್ ಗಡಿಯಲ್ಲಿನ ತನ್ನ ತಂಟೆಯನ್ನಿನ್ನೂ ನಿಲ್ಲಿಸಿಲ್ಲ.
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೈನಿಕ ಎಮ್ ಕೆ ಸಲಾಮ್ "ನಾವು ಯಾವುದೇ ಸವಾಲಿಗೆ ಸದಾ ಸಿದ್ಧರಾಗಿರುತ್ತೇವೆ. ವೈರಿಗಳ ಉಪಟಳಕ್ಕೆ ತಕ್ಕ ಉತ್ತರ ನೀಡಲು ನಾವು ಸಮರ್ಥರಾಗಿದ್ದೇವೆ. ಅಮರ ಜವಾನರಿಗೆ ನೀಡುವ ಗೌರವ ನಮ್ಮ ಸ್ಪೂರ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಶಕ್ಕಾಗಿ ಏನಾದರೂ ಮಾಡುವಂತೆ ಪ್ರೇರೇಪಿಸುತ್ತದೆ" ಎನ್ನುತ್ತಾರೆ ಸೈನಿಕ ಗತ್ತಿನಿಂದ. 

ವೆಬ್ದುನಿಯಾವನ್ನು ಓದಿ