ಸಚಿವ ಪರಮೇಶ್ವರ್‌ ನಾಯ್ಕರಿಂದ ಡಿಎಸ್‌ಪಿ ಶೆಣೈ ವರ್ಗಾವಣೆ: ಕೆಪಿಸಿಸಿಗೆ ವರದಿ ಕೇಳಿದ ಎಐಸಿಸಿ

ಶನಿವಾರ, 30 ಜನವರಿ 2016 (15:06 IST)
ಮೊಬೈಲ್ ಕರೆಗಳಿಗೆ ಉತ್ತರಿಸಲಿಲ್ಲ ಎನ್ನುವ ಕಾರಣಕ್ಕೆ ಕಾರ್ಮಿಕ ಖಾತೆ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ, ಪೊಲೀಸ್ ಅಧಿಕಾರಿ ಡಿಎಸ್‌ಪಿ ಅನುಪಮಾ ಶೆಣೈ ಅವರನ್ನು ವರ್ಗಾಯಿಸಿದ್ದಾಗಿ ಸಾರ್ವಜನಿಕ ಸಭೆಯಲ್ಲಿ ತಾವೇ ಒಪ್ಪಿಕೊಂಡಿರುವ ಘಟನೆ ಕುರಿತಂತೆ ವರದಿ ನೀಡಲು ಕೆಪಿಸಿಸಿಗೆ ಎಐಸಿಸಿ ಆದೇಶ ನೀಡಿದೆ. 
 
ಇದೊಂದು ಉತ್ತಮ ಬೆಳವಣಿಗೆಯಲ್ಲ. ಘಟನೆ ಕುರಿತಂತೆ ಸಚಿವ ಪರಮೇಶ್ವರ್ ನಾಯ್ಕ ವಿವರಣೆ ಪಡೆಯಲಾಗುವುದು. ನಾನು ದೂರವಾಣಿಯಲ್ಲಿ ಅವರೊಂದಿಗೆ ಮಾತನಾಡಿದ್ದು, ಸಂಪೂರ್ಣ ವಿವರಣೆ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
 
ಘಟನೆಯ ಬಗ್ಗೆ ಸಚಿವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವುದನ್ನು ಪರಮೇಶ್ವರ್ ತಳ್ಳಿಹಾಕಿದ್ದಾರೆ. ಆದರೆ, ಪರಮೇಶ್ವರ್ ನಾಯ್ಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತರಾಗಿದ್ದರಿಂದ ಮುಖ್ಯಮಂತ್ರಿಗಳಿಗೆ ಹಿನ್ನೆಡೆಯಾದಂತಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.
 
ಏತನ್ಮಧ್ಯೆ, ಡಿಎಸ್‌ಪಿ ಅನುಪಮಾ ಶೆಣೈಯವರನ್ನು ಇಲಾಖೆಯ ಕಾರ್ಯಗಳಿಗಾಗಿ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗಿದೆಯೇ ಹೊರತು ವರ್ಗಾವಣೆ ಮಾಡಲಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
 
ಮೊಬೈಲ್ ಕರೆಗಳನ್ನು ಸ್ವೀಕರಿಸಿಲ್ಲ ಎನ್ನುವ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ ಡಿಎಸ್‌ಪಿ ಶೆಣೈಯವರನ್ನು ವರ್ಗಾವಣೆ ಮಾಡಿರುವುದು ಜಿಲ್ಲಾ ಪೊಲೀಸ್ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ