ಮೋದಿಯನ್ನು ಹೊಗಳಿದ ಚಿದಂಬರಂ ಪುತ್ರ

ಶನಿವಾರ, 24 ಜನವರಿ 2015 (09:42 IST)
ಇತರ ಪಕ್ಷಗಳ ನಾಯಕರು ಅದರಲ್ಲೂ ಕಾಂಗ್ರೆಸ್ ನಾಯಕರು ಮೋದಿಯನ್ನು ಹೊಗಳುವುದು ಇತ್ತೀಚಿಗೆ ಸಾಮಾನ್ಯವಾಗಿ ಬಿಟ್ಟಿದೆ. ಈಗ ಮಾಜಿ ಕೇಂದ್ರ ಸಚಿವ ಚಿದಂಬರ್ ಪುತ್ರ ಕಾರ್ತಿ ಚಿದಂಬರಂ ಕೂಡ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. 
 
ಚೆನ್ನೈನಲ್ಲಿ ತಮ್ಮ ಬೆಂಬಲಿಗರೊಂದಿಗೆ ಗುರುವಾರ ಔತಣಕೂಟವೊಂದರಲ್ಲಿ ಪಾಲ್ಗೊಂಡಿದ್ದ ಕಾರ್ತಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡಿದ್ದರು. ''ನೀವು ಮೋದಿಯನ್ನು ಒಪ್ಪಿ ಅಥವಾ ಬಿಡಿ. ಆದರೆ ಅವರ ರಾಜಕೀಯ ತಂತ್ರಗಾರಿಕೆ, ವರ್ಚಸ್ಸು ಬೆಳಿಸಿಕೊಂಡ ರೀತಿ ಯಾರಾದರೂ ಶ್ಲಾಘಿಸುವಂತದ್ದೇ'' ಎಂದು ಕಾರ್ತಿ ಚಿದಂಬರಂ ಹೇಳಿದ್ದರು. 
 
ಮೋದಿಯನ್ನು ಹೊಗಳುವುದರ ಜತೆ ಕಾಂಗ್ರೆಸ್‌ನ್ನು ತೆಗಳಿದ್ದ ಕಾರ್ತಿ, ''2016ರ ವಿಧಾನಸಭೆಯಲ್ಲಿ ಕಾಂಗ್ರೆಸ್ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ 5,000 ಮತಗಳೇ ಸಿಗುವುದು ಕಷ್ಟ'' ಎಂದಿದ್ದರು.
 
ಈ ಹಿನ್ನೆಲೆಯಲ್ಲಿ ಪಕ್ಷ  ಕಾರ್ತಿ ಚಿದಂಬರಂಗೆ ಕಾಂಗ್ರೆಸ್ ಶುಕ್ರವಾರ ಶೋಕಾಸ್ ನೋಟಿಸ್ ನೀಡಿದೆ.
 
ಕಾರ್ತಿ ವಿರುದ್ಧ ಪಕ್ಷ ವಿರೋಧಿ ಹೇಳಿಕೆ ನೀಡಿದ ಆರೋಪ ಹೊರಿಸಿರುವ ತಮಿಳುನಾಡು ಕಾಂಗ್ರೆಸ್ ಸಮಿತಿಯ, ನಿಮ್ಮನ್ನು ಪಕ್ಷದಿಂದ ಏಕೆ ವಜಾ ಮಾಡಬಾರದು ಎಂದು ಸ್ಪಷ್ಟನೆ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
 
ಲೋಕಸಭೆಯಲ್ಲಿ ಮೋದಿ ಗೆಲುವು ಭಾರತೀಯತೆಯ ಪ್ರತೀಕ ಎಂದು ಹಿರಿಯ ಕಾಂಗ್ರೆಸ್ ನಾಯಕ ದ್ವಿವೇದಿ ಇತ್ತೀಚಿಗೆ ಹೇಳಿಕೆ ನೀಡಿದ್ದು, ಅದರ ಬೆನ್ನ ಹಿಂದೆಯೇ ಕಾರ್ತಿ ಕೂಡ ಈ ರೀತಿಯ ಮಾತುಗಳನ್ನಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಇರಿಸು ಮುರಿಸು ಉಂಟುಮಾಡಿದೆ.

ವೆಬ್ದುನಿಯಾವನ್ನು ಓದಿ