ಮೋದಿ ಪ್ರಾಮಾಣಿಕ ಮತ್ತು ಪರಿಶ್ರಮಿ ಎಂದು ಹೊಗಳಿದ ಕರುಣಾನಿಧಿ

ಗುರುವಾರ, 22 ಮೇ 2014 (15:56 IST)
ನರೇಂದ್ರ ಮೋದಿ ಬಿಜೆಪಿಯ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾದ ಮತ್ತು ದೇಶದ 16 ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನವನ್ನು ತೆಗೆದುಕೊಳ್ಳಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಹ್ವಾನಿಸಿದ ಒಂದು ದಿನದ ತರುವಾಯ ನರೇಂದ್ರ ಮೋದಿ ಅವರಿಗೆ ಅಭಿನಂದನಾ ಪತ್ರ ಬರೆದಿರುವ ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ನಿಮ್ಮ 'ಪ್ರಧಾನಿ ಅಧಿಕಾರಾವಧಿ ತೃಪ್ತಿಕರವಾಗಿರಲಿ' ಎಂದು ಹಾರೈಸಿದ್ದಾರೆ. 
 
ಜನ್ಮಜಾತ ಬುದ್ಧಿವಂತಿಕೆ, ಕಠಿಣ ಮತ್ತು ಪ್ರಾಮಾಣಿಕ ಕೆಲಸದ ಮೂಲಕ ನೀವೇರಿದ ಉನ್ನತ ಸ್ಥಿತಿ  ಪ್ರಶಂಸನೀಯ ಎಂದು ಕರುಣಾನಿಧಿ ಪತ್ರ ಬರೆದಿದ್ದಾರೆ.
 
ಮೋದಿಯವರು ಸಂಸತ್ ಭವನದಲ್ಲಿ ನೀಡಿದ ಧನ್ಯವಾದ ಭಾಷಣವನ್ನು ಉಲ್ಲೇಖಿಸಿದ ಕರುಣಾನಿಧಿ ನಿಮ್ಮ ಸರಕಾರ ಬಡವರು, ಮಹಿಳೆಯರು ಮತ್ತು ಯುವಕರಿಗಾಗಿ ಕೆಲಸ ಮಾಡಲಿದೆ ಎಂದು ನಿನ್ನೆ ನೀವು ಹೇಳಿದ್ದೀರಿ. ನಿಮ್ಮ ಈ ಉದಾತ್ತ ಕನಸನ್ನು  ನೀವು ನಿಜವಾಗಿಸಲಿದ್ದೀರಿ ಎಂದು ಜನರು ನಿರೀಕ್ಷಿಸುತ್ತಿದ್ದಾರೆ.  ಈ ವಿಶಾಲವಾದ ದೇಶದ ಎಲ್ಲಾ ವಿಭಾಗದವರ ಆಕಾಂಕ್ಷೆಗಳನ್ನು ನೀವು ಈಡೇರಿಸುವಂತಾಗಲಿ, ಸಂತೋಷದ ಮತ್ತು ತೃಪ್ತಿಯ ಪ್ರಧಾನಿ ಅಧಿಕಾರಾವಧಿ ನಿಮ್ಮದಾಗಿರಲಿ ಎಂದು ನಿಮಗೆ ಡಿಎಂಕೆ ಪಕ್ಷದ ಪರವಾಗಿ, ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಎಂದಿದ್ದಾರೆ. 
 
ಕಳೆದ ಡಿಸೆಂಬರ್‌ನಲ್ಲಿ ಮೋದಿಯನ್ನು ಉತ್ತಮ ವ್ಯಕ್ತಿ ಎಂದು ಡಿಎಂಕೆ ನಾಯಕ ಬಣ್ಣಿಸಿದ್ದರು. "ಮೋದಿ ಉತ್ತಮ ವ್ಯಕ್ತಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.ಅವರು ತಮ್ಮ ರಾಜ್ಯದ ಅಭಿವೃದ್ಧಿಗಾಗಿ ಅತಿಯಾದ ಕಾಳಜಿ ತೆಗೆದುಕೊಂಡಿದ್ದಾರೆ. ಆಡಳಿತಗಾರನಾಗಿ ಅವರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರಿಂದ ಜನರು ಅವರನ್ನು ಪುನಃ ಪುನಃ ಆಯ್ಕೆ ಮಾಡಿದರು. ಅವರು ದೇಶವನ್ನು ನಡೆಸಲು ಸಮರ್ಥರೇ ಎಂಬುದನ್ನು ಮತದಾರರು ನಿರ್ಣಯಿಸಬೇಕು" ಎಂದು ಕರುಣಾನಿಧಿ ಹೇಳಿದ್ದರು. 
 
ಫೆಬ್ರುವರಿಯಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸುವ ಸ್ವಲ್ಪದಿನ ಮೊದಲು ಕೂಡ ಮೋದಿಯನ್ನು ಪರಿಶ್ರಮಿ ಮತ್ತು ತಮ್ಮ ಉತ್ತಮ ಗೆಳೆಯ ಎಂದು ಕರುಣಾನಿಧಿ ಪ್ರಶಂಸಿದ್ದ ಅವರು,  ತಮ್ಮ ಚುನಾವಣಾ ಪ್ರಚಾರದ ವೇಳೆ ಯು ಟರ್ನ ಹೊಡೆದು ತಮಿಳುನಾಡಿನಲ್ಲಿ ಮೋದಿ ಮತ್ತು ಬಿಜೆಪಿಗೆ ಜಾಗವಿಲ್ಲ ಎಂದಿದ್ದರು. ತಮಿಳುನಾಡಿನಲ್ಲಿ ಮೋದಿ ಅಲೆ ಇದೆ ಎನ್ನುವುದನ್ನು ಸಹ ಅವರು ಅಲ್ಲಗಳೆದಿದ್ದರು. 

ವೆಬ್ದುನಿಯಾವನ್ನು ಓದಿ