ಕಾಶ್ಮೀರ: ಪ್ರವಾಹದಲ್ಲಿ ಸಿಲುಕಿದ್ದ 9 ಜನ ಕನ್ನಡಿಗರ ರಕ್ಷಣೆ

ಬುಧವಾರ, 10 ಸೆಪ್ಟಂಬರ್ 2014 (10:26 IST)
ಮೇಘಸ್ಪೋಟದ ಕಾರಣಕ್ಕೆ ಕಣಿವೆ ನಾಡು ಕಾಶ್ಮೀರದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಲ್ಲಿ  ಸಿಲುಕಿರುವ 500 ಕ್ಕೂ ಹೆಚ್ಚು ಕನ್ನಡಿಗರ ಪೈಕಿ ಒಂದೇ ಕುಟುಂಬದ  9 ಜನರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಬೆಂಗಳೂರಿನ ಚಿಕ್ಕಲ ಸಂದ್ರದ ನಿವಾಸಿಗಳಾದ  ಕೃಷ್ಣಮೂರ್ತಿ ಗಂಗಾಧರ್ , ಅವರ ಪತ್ನಿ ವತ್ಸಲಾ, ಮಗ ಶ್ರೀಹರ್ಷ, ಸೊಸೆ ಪೂರ್ಣಿಮಾ, ಮೊಮ್ಮಗ ಶಂಶಾಕ್ ಮತ್ತು ಸಂಬಂಧಿಕರಾದ  ಭಾರತಿ , ಮಂಜುನಾಥ್, ಸೀತಾಲಕ್ಷ್ಮೀ, ಕಿರಣ್ ಎನ್ನುವವರನ್ನು ಜವಾಹರ್ ನಗರದ ಗುಲ್ಶನ್ ಮಹಲ್ ಬಳಿ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಇವರೆಲ್ಲ ಸೆಪ್ಟಂಬರ್ 5 ರಿಂದ ನಾಪತ್ತೆಯಾಗಿದ್ದರು. 
 
ಈಗ ಅವರೆಲ್ಲ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದು, ಇಂದು ಸಾಯಂಕಾಲದೊಳಗೆ  ವಿಮಾನದ ಮೂಲಕ ಬೆಂಗಳೂರಿಗೆ ತಲುಪುವ ನಿರೀಕ್ಷೆ ಇದೆ. 
 
ಭಾರೀ ಮಳೆ, ಪ್ರವಾಹದ ಕಾರಣ ಶ್ರೀನಗರದ  80% ಭಾಗದಲ್ಲಿ ವಿದ್ಯುತ್ ಸಂಪರ್ಕ ಮತ್ತು  ಹಲವೆಡೆ ಮೊಬೈಲ್ ಸಂಪರ್ಕವೂ ಕೂಡ ಕಡಿತಗೊಂಡಿದೆ. 
 
ಅಪಾಯದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗಾಗಿ ಈಗಾಗಲೇ ಐಎಎಸ್ ಅಧಿಕಾರಿ ರಮಣದೀಪ್ ಅವರ ನಿಯೋಗ ಕಾಶ್ಮೀರದಲ್ಲಿದ್ದು, ಇನ್ನೊಂದು ಆಯೋಗವು ಕೂಡ ಇಂದು ಶ್ರೀನಗರಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ