ಕೇಂದ್ರದ ಪ್ಯಾಕೇಜ್‌ ಬಿಹಾರಿ ಮತದಾರರನ್ನು ಖರೀದಿಸುವ ತಂತ್ರ: ಕೇಜ್ರಿವಾಲ್ ಆರೋಪ

ಗುರುವಾರ, 27 ಆಗಸ್ಟ್ 2015 (21:02 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಿಹಾರ್ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿ ಮತದಾರರನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
 
ಮೋದಿ ಸರಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾದರೂ ಬಿಹಾರ್ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಕಾರವೆತ್ತದ ಮೋದಿ, ಬಿಹಾರ್ ಚುನಾವಣೆ ಬಂದ ಕೂಡಲೇ ರಾಜ್ಯದ ಅಭಿವೃದ್ಧಿಯ ನೆಪದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಅಚ್ಚರಿ ತಂದಿದೆ. ಇಂತಹ ತಂತ್ರಗಳಿಗೆ ಮತದಾರ ಮಣಿಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಪ್ರಸ್ತುತ ರಾಜಕೀಯ ವ್ಯವಸ್ಥೆಯಿಂದ ರೋಸಿ ಹೋದ ದೆಹಲಿ ಜನತೆ ನಮ್ಮನ್ನು ಆಯ್ಕೆ ಮಾಡಿದ್ಗಾರೆ. ಇದೀಗ ದೆಹಲಿ ಸರಕಾರ ಯಶಸ್ವಿಯಾಗಿ ನಡೆಯುತ್ತಿದೆ. ದೆಹಲಿಯಲ್ಲಿ ವಿದ್ಯುತ್ ಸರಬರಾಜು ಮತ್ತು ಮೊಹಲ್ಲಾ ಸಭೆಗಳನ್ನು ಮಾದರಿಯಾಗಿಸಿದ್ದೇವೆ ಎಂದು ತಿಳಿಸಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, ಸ್ವಚ್ಚ ಭಾರತ ಅಭಿಯಾನ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಲೇವಡಿ ಮಾಡಿದರು.
 
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಭ್ರಷ್ಟಚಾರ ನಿಗ್ರಹ ದಳಕ್ಕಾಗಿ ದಕ್ಷ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿದ್ದರು. ಆದರೆ, ಕೇಂದ್ರ ಸರಕಾರದ ದಂದ್ವ ನೀತಿಗಳಿಂದಾಗಿ ನಮ್ಮ ಪ್ರಯತ್ನಗಳು ವಿಫಲವಾದವು ಎಂದು ಹೇಳಿದ್ದಾರೆ.  
 
ಕೇಂದ್ರ ಸರಕಾರ ಬಡವರ, ರೈತರ ಮತ್ತು ಜನಸಾಮಾನ್ಯರ ವಿರೋಧಿಯಾಗಿದೆ ಎನ್ನುವ ಭಾವನೆ ಜನರಲ್ಲಿ ಬಂದಿದೆ. ನಿತೀಶ್ ಕುಮಾರ್ ಉತ್ತಮ ಅಡಳಿತಗಾರರಾಗಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ನಿತೀಶ್ ಕುಮಾರ್‌ರನ್ನು ಹೊಗಳಿದರು.

ವೆಬ್ದುನಿಯಾವನ್ನು ಓದಿ