ಕೆಮ್ಮಿನ ಚಿಕಿತ್ಸೆಗಾಗಿ ರಾಜಧಾನಿಗೆ ಆಗಮಿಸಲಿದ್ದಾರೆ ಕೇಜ್ರಿವಾಲ್...?!

ಬುಧವಾರ, 4 ಮಾರ್ಚ್ 2015 (09:01 IST)
ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ದೆಹಲಿಗೆ 2ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ  ಅರವಿಂದ್ ಕೇಜ್ರಿವಾಲ್ ಅವರು ಹತ್ತು ದಿನಗಳ ಕಾಲ ರಜೆ ಪಡೆದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ..?!
 
ಹೌದು, ಪ್ರಸ್ತುತ ಕೆಮ್ಮು ಮತ್ತು ಮಧುಮೇಹದಿಂದ ಬಳಲುತ್ತಿರುವ ಕೇಜ್ರಿವಾಲ್, ನಗರದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಕೇಜ್ರಿವಾಲ್‌ ಅವರನ್ನು ಕೆಮ್ಮಿನ ಸಮಸ್ಯೆಯು ಬಹುಕಾಲದಿಂದ ಕಾಡುತ್ತಿದ್ದು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ವೈದ್ಯರೊರ್ವರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಚಿಕಿತ್ಸೆ ಪಡೆಯುವ ಸಲುವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ.   
 
ಕೇಜ್ರಿವಾಲ್ ಅವರನ್ನು ಕೆಮ್ಮು ಈ ಹಿಂದಿನಿಂದಲೂ ಕೂಡ ಕಾಡುತ್ತಿತ್ತು. ಆದರೆ ಇತ್ತೀಚೆಗೆ ನಡೆದ ದೆಹಲಿಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. 
 
ಇನ್ನು ಕೇಜ್ರಿವಾಲ್ ಆಗಮಿಸುತ್ತಿರುವ ಚಿಕಿತ್ಸಾ ಕೇಂದ್ರವು ತುಮಕೂರು ರಸ್ತೆಯಲ್ಲಿದ್ದು, ಆ ಕೇಂದ್ರದ ಹೆಸರು ಜಿಂದಾಲ್‌ ಪ್ರಕೃತಿ ಚಿಕಿತ್ಸಾ ಕೇಂದ್ರ. ಕೇಜ್ರಿ ಸುಮಾರು ಹತ್ತು ದಿನಗಳ ಕಾಲ ಇಲ್ಲಿ ಚಿಕಿತ್ಸೆ ಪಡೆಯಲಿದ್ದು, ನಾಳೆ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಸಂಪೂರ್ಣ ರಾಜಕೀಯ ಆಡಳಿತವನ್ನು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರೇ ನಿಭಾಯಿಸಲಿದ್ದಾರೆ. 
 
ಬೆಂಗಳೂರಿನ ಡಾ.ನಾಗೇಂದ್ರ ಅವರು ನಡೆಸುತ್ತಿರುವ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುವಂತೆ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು. ಆದರೆ, ಕೇಜ್ರಿವಾಲ್ ಜಿಂದಾಲ್‌ನಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ