ಕಾರನ್ನು ವರದಕ್ಷಿಣೆಯಾಗಿ ಕೇಳಿದ ಸೈನಿಕನಿಗೆ ವಿವಾಹ ನಿಷೇಧ ಹೇರಿದ ಖಾಫ್ ಪಂಚಾಯಿತಿ
ಶುಕ್ರವಾರ, 10 ಏಪ್ರಿಲ್ 2015 (16:07 IST)
ಮದುವೆಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯ ಕುಟುಂಬದವರಿಗೆ ವರದಕ್ಷಿಣೆ ಕೇಳಿದ ಸೈನಿಕನಿಗೆ ಎರಡು ವರ್ಷ ಮದುವೆಯಾಗದಂತೆ ಖಾಪ್ ಪಂಚಾಯಿತಿ ನಿಷೇಧ ಹೇರಿ ಆದೇಶ ಹೊರಡಿಸಿದ ಘಟನೆ ರಸೂಲ್‌ಪುರ್ ಗ್ರಾಮದಿಂದ ವರದಿಯಾಗಿದೆ.
ಸೈನಿಕನೊಬ್ಬ ತಾನು ವಿವಾಹವಾಗಲು ಬಯಸಿದ ಯುವತಿಯ ಕುಟುಂಬಕ್ಕೆ ಹೊಸತಾದ ಕಾರನ್ನು ವರದಕ್ಷಿಣೆಯಾಗಿ ಕೊಡುವಂತೆ ಒತ್ತಡ ಹೇರಿದ್ದ ಎನ್ನಲಾಗಿದೆ. ಮಾಹಿತಿ ಪಡೆದ ಖಾಪ್ ಪಂಚಾಯಿತಿ ಮುಖ್ಯಸ್ಥ ನರೇಶ್ ತಿಕೈತ್, ಸೈನಿಕನಿಗೆ ವಿವಾಹ ನಿಷೇಧ ಹೇರುವುದರೊಂದಿಗೆ 81 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸೈನಿಕನಿಗೆ ಕಾಸೀಂಪುರ್ ಗ್ರಾಮದ ಯುವತಿಯೊಂದಿಗೆ ಏಪ್ರಿಲ್ 24 ಕ್ಕೆ ವಿವಾಹ ನಿಶ್ಚಯವಾಗಿತ್ತು. ಆದರೆ, ತದ ನಂತರ ಆತನ ಕುಟುಂಬದವರು ಕಾರಿನ ಬೇಡಿಕೆಯಿಟ್ಟಿದ್ದರು. ಇದರಿಂದ ನೊಂದ ಯುವತಿಯ ಕುಟುಂಬದವರು ಖಾಪ್ ಪಂಚಾಯಿತಿಗೆ ಮೊರೆಹೋಗಿ ವಿವಾದವನ್ನು ಇತ್ಯರ್ಥಗೊಳಿಸುವಂತೆ ಕೋರಿದ್ದರು.
ಉಭಯ ಕುಟುಂಬಗಳ ವಿವಾದವನ್ನು ಆಲಿಸಿದ ಖಾಪ್ ಪಂಚಾಯಿತಿ, ವರದಕ್ಷಿಣೆ ಕೇಳಿ ಯುವತಿಯ ಕುಟುಂಬದವರಿಗೆ ಆಘಾತ ಮೂಡಿಸಿದ್ದಕ್ಕಾಗಿ ಸೈನಿಕನಿಗೆ ಎರಡು ವರ್ಷ ವಿವಾಹ ನಿಷೇಧ ಹಾಗೂ 81 ಸಾವಿರ ರೂಪಾಯಿಗಳ ದಂಡವನ್ನು ಪಾವತಿಸುವಂತೆ ಆದೇಶ ನೀಡಿದೆ.