ಸಿಎಂ ಮುಫ್ತಿ ಹೇಳಿಕೆಗೆ ಖರ್ಗೆ ಖಂಡನೆ: ಸದನದಲ್ಲಿ ಕೋಲಾಹಲ ಎಬ್ಬಿಸಿದ ಕಾಂಗ್ರೆಸ್

ಸೋಮವಾರ, 2 ಮಾರ್ಚ್ 2015 (12:27 IST)
ಜಮ್ಮು ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅವರು ನಿನ್ನೆ ನೀಡಿದ್ದ ಹೇಳಿಕೆ ಒಪ್ಪುವಂತಹದ್ದಲ್ಲ. ಆ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಲೋಕಸಭಾ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಸದನದಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
 
 
ಸದನದ ಅಧಿವೇಶನ ಸಂದರ್ಭದಲ್ಲಿ ಮಾತನಾಡಿದ ಅವರು, ಸಿಎಂ ಮುಫ್ತಿ ಅವರು ನಿನ್ನೆ ನೀಡಿರುವ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಅಲ್ಲದೆ ಆ ಹೇಳಿಕೆ ಎಂದಿಗೂ ಒಪ್ಪುವಂತಹದ್ದಲ್ಲ. ಬಿಜೆಪಿ ಹಾಗೂ ಪಿಡಿಪಿ ಸೇರಿ ಮೈತ್ರಿ ಸರ್ಕಾರವನ್ನು ರಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಿಎಂ ಹೇಳಿಕೆ ಸಂಬಂಧ ಸೂಕ್ತ ವಿವರಣೆ ನೀಡಬೇಕು. 
 
ಚುನಾವಣೆ ನಡೆಸಲೆಂದು ರಾಷ್ಟ್ರದಲ್ಲಿ ಆಯೋಗವಿದ್ದು, ಚುನಾವಣೆಯನ್ನು ಆಯೋಗವೇ ಸುಸೂತ್ರವಾಗಿ ನಡೆಸಿದೆ. ಆದರೆ ಸಿಎಂ ಮುಫ್ತಿ, ಪಾಕಿಸ್ತಾನ ಹಾಗೂ ಉಗ್ರವಾದಿಗಳನ್ನು ಹೊಗಳಿದ್ದಾರೆ. ಅದೂ ಅಲ್ಲದೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಹೀಗೆ ಪ್ರತಿಕ್ರಿಯಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. 
 
ಇದೇ ವೇಳೆ, ಪ್ರತಿಕ್ರಿಯಿಸಿದ ಖರ್ಗೆ, ಸಿಎಂ ಮುಫ್ತಿ ಹೇಳಿಕೆ ನೀಡಿದ ವೇಳೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕೂಡ ಈ ಹೇಳಿಕೆಯನ್ನು ತಿಳಿಸಿದ್ದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಸದನಕ್ಕೆ ಆಗಮಿಸಿ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಲಿ, ಅಲ್ಲದೆ ಅವರೂ ಆ ಹೇಳಿಕೆಯನ್ನು ಖಂಡಿಸಲಿ. ಅಷ್ಟೇ ಅಲ್ಲ ಸದನದಲ್ಲಿ ಖಂಡನಾ ನಿರ್ಣಯವನ್ನು ಮಂಡಿಸಬೇಕು. ಜೊತೆಗೆ ಮುಫ್ತಿ ಅವರಿಗೆ ಖಡಕ್ ಸೂಚನೆಯನ್ನು ರವಾನಿಸಬೇಕೆಂದು ಒತ್ತಾಯಿಸಿದರು. 
 
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪ್ರತಿಕ್ರಿಯಿಸಿ, ಆ ಹೇಳಿಕೆ ಮುಫ್ತಿ ಅವರ ವೈಯಕ್ತಿಕತೆಗೆ ಸಂಬಂಧಿಸಿದ್ದು, ಅಲ್ಲದೆ ಮೋದಿಗೂ ಹೇಳಿಕೆಗೂ ಸಂಬಂಧವಿಲ್ಲ ಎಂದರು. ಈ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ಸಭಾತ್ಯಾಗ ಮಾಡಿತು. ಸಿಎಂ ಹೇಳಿಕೆಯನ್ನು ಸಮಾಜವಾದಿ ಪಕ್ಷದ ಸದಸ್ಯರೂ ಕೂಡ ತೀವ್ರವಾಗಿ ಖಂಡಿಸಿದರು. 
 
ನಿನ್ನೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಸಿಎಂ ಮುಫ್ತಿ, ಪಾಕಿಸ್ತಾನದ ಉಗ್ರಗಾಮಿಗಳು ಹಾಗೂ ಹುರಿಯತ್ ಸಂಘಟನೆಯ ಪ್ರತ್ಯೇಕತಾವಾದಿಗಳು ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯುವಂತಹ ವಾತಾವರಣ ಸೃಷ್ಟಿಸಿದ್ದರು ಎನ್ನುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು.  

ವೆಬ್ದುನಿಯಾವನ್ನು ಓದಿ