ಮೊದಲ ಬಾರಿಗೆ ಶಾಸಕರಾದ ಖಟ್ಟರ್‌ಗೆ ಒಲಿಯಿತು ಮುಖ್ಯಮಂತ್ರಿ ಪಟ್ಟ

ಮಂಗಳವಾರ, 21 ಅಕ್ಟೋಬರ್ 2014 (13:17 IST)
ಹರ್ಯಾಣದಲ್ಲಿ ಮೊದಲ ಬಾರಿಗೆ ಶಾಸಕರಾದ ಮನೋಹರಲಾಲ್  ಖಟ್ಟರ್  ಅವರಿಗೆ ಹರ್ಯಾಣದ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಖಟ್ಟರ್  ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.  ಹರ್ಯಾಣದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಸಿದ್ಧತೆ ನಡೆಸಿದ್ದು. ಖಟ್ಟರ್ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಚಂಡೀಗಡ್‌ನಲ್ಲಿ ನಡೆಯಿತು. ಸಭೆಯಲ್ಲಿ ಬಿಜೆಪಿ ವೀಕ್ಷಕರಾದ ವೆಂಕಯ್ಯ ನಾಯ್ಡು, ದಿನೇಶ್ ಶರ್ಮಾ ಸೇರಿದಂತೆ ನೂತನ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು. 

   ಖಟ್ಟರ್ ಕರ್ನಾಲ್ ಕ್ಷೇತ್ರದ ಶಾಸಕರಾಗಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.  ಖಟ್ಟರ್ ಮೊದಲಿಂದಲೂ ಆರ್‌ಎಸ್‌ಎಸ್ ಮುಖಂಡರಾಗಿದ್ದು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಆಪ್ತರು ಎಂದು ಹೇಳಲಾಗಿದೆ. ಖಟ್ಟರ್ ಪ್ರಧಾನಿ ಮೋದಿಗೆ ಕೂಡ ಆಪ್ತರಾಗಿದ್ದರು. 40 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದರೂ ಚುನಾವಣೆಗೆ ಸ್ಪರ್ಧಿಸಿರಲಿಲ್ಲ.  ಖಟ್ಟರ್ ಇದೇ ಮೊದಲ ಬಾರಿಗೆ ಕರ್ನಾಲ್ ಕ್ಷೇತ್ರದಿಂದ ಸ್ಪರ್ಧಿಸಿ 63,000 ಮತಗಳ ಅಂತರದಿಂದ ಗೆದ್ದಿದ್ದರು.

ಇವರು ಮೂಲತಃ ಪಂಜಾಬ್‌ನವರು. ಕಳೆದ 40 ವರ್ಷಗಳಿಂದ ಆರ್‌ಎಸ್‌ಎಸ್ ಪ್ರಚಾರಕರಾಗಿದ್ದರು.   ಜಾಟೇತರ ನಾಯಕರಾರನ್ನು ಆಯ್ಕೆಮಾಡುವ ಉದ್ದೇಶದಿಂದ ಖಟ್ಟರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲು ಉದ್ದೇಶಿಸಲಾಗಿದೆ. ಖಟ್ಟರ್ ನೇಮಕದಿಂದ 2.,3 ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಮತ್ತು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಅನೇಕ ಮಂದಿಗೆ ನಿರಾಶೆಯಾಗಿರಬಹುದು. ಆದರೆ ಬಿಜೆಪಿಯಲ್ಲಿ ಹೈಕಮಾಂಡ್ ಆದೇಶವೇ ಅಂತಿಮ ತೀರ್ಮಾನವಾಗಿದ್ದು, ಅದರ ತೀರ್ಮಾನಕ್ಕೆ ಬದ್ಧರಾಗಬೇಕಿದೆ. 

ವೆಬ್ದುನಿಯಾವನ್ನು ಓದಿ