ಆತ್ಮಹತ್ಯೆ ಮಾಡಬೇಡಿ, ಬೇಕಾದ್ರೆ ಪೊಲೀಸರನ್ನು ಹತ್ಯೆ ಮಾಡಿ: ಯುವಕರಿಗೆ ಹಾರ್ದಿಕ್ ಪಟೇಲ್ ಸಲಹೆ

ಭಾನುವಾರ, 4 ಅಕ್ಟೋಬರ್ 2015 (16:54 IST)
ಪಟೇಲ್ ಸಮುದಾಯದ ಯುವಕರು ಪೊಲೀಸರನ್ನು ಹತ್ಯೆ ಮಾಡಬೇಕೇ ಹೊರತು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ಎಂದು ಪಟೇಲ್ ಮೀಸಲಾತಿ ಹೋರಾಟ ಸಮಿತಿಯ ಮುಖಂಡ ಹಾರ್ದಿಕ್ ಪಟೇಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
 
ಒಂದು ವೇಳೆ ನಿಮಗೆ ಅಷ್ಟು ಧೈರ್ಯವಿದ್ದರೆ ಹೋಗಿ ಪೊಲೀಸರನ್ನು ಹತ್ಯೆ ಮಾಡಿ. ಪಟೇಲ್ ಸಮುದಾಯದವರು ಯಾವತ್ತೂ ಆತ್ಮಹತ್ಯೆಗೆ ಶರಣಾಗುವವರಲ್ಲ ಎಂದು ಹೇಳಿದ್ದಾರೆ.
 
ವಿಪುಲ್ ದೇಸಾಯಿ ಎನ್ನುವ ಯುವಕ ಪಟೇಲ್ ಮೀಸಲಾತಿ ಹೋರಾಟಕ್ಕೆ ಬೆಂಬಲಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ಹೇಳಿಕೆ ನೀಡಿದ್ದಾರೆ. 
 

ವಿಪುಲ್ ದೇಸಾಯಿ ಮನೆಗೆ ಭೇಟಿ ನೀಡಿದ ಹಾರ್ದಿಕ್, ನಾವು ಪಟೇಲ್ ಸಮುದಾಯದ ಮಕ್ಕಳಾಗಿದ್ದೇವೆ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಇಬ್ಬರು ಅಥವಾ ಮೂವರು ಪೊಲೀಸರನ್ನು ಹತ್ಯೆ ಮಾಡಿ ಎಂದು ಹೇಳಿರುವುದಾಗಿ ವರದಿಯಾಗಿದೆ.
 
ಪಟೇಲ್ ಮೀಸಲಾತಿ ಹೋರಾಟವನ್ನು ಆರಂಭಿಸಿದ್ದ ಸರ್ದಾರ್ ಪಟೇಲ್ ಗ್ರೂಪ್ ಸಂಚಾಲಕ ಲಾಲ್‌ಜಿ ಪಟೇಲ್, ಹಾರ್ದಿಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 
 
ಲಾಲ್‌ಜಿ ಮಾತನಾಡಿ, ನಮ್ಮದು ಅಂಹಿಸಾವಾದಿ ಹೋರಾಟವಾಗಿದ್ದರಿಂದ ಯಾರನ್ನೂ ಹತ್ಯೆ ಮಾಡುವ ಮಾತನಾಡಬಾರದು. ಹಾರ್ದಿಕ್ ಹೇಳಿಕೆ ಸರಿಯಾಗಿಲ್ಲ. ಸಮಾಜದಲ್ಲಿ ಅಶಾಂತಿ ಮೂಡಿಸುವ ಹೇಳಿಕೆ ನೀಡಬಾರದು ಎಂದು ಹಾರ್ದಿಕ್‌ಗೆ ಸಲಹೆ ನೀಡಿದರು.
 
ಹಾರ್ದಿಕ್ ಪಟೇಲ್‌ರನ್ನು ಪಟೇಲ್ ಸಮುದಾಯದ ನಾಯಕರಾಗಿ ಸ್ವೀಕರಿಸಲಾಗಿದೆ. ಆದ್ದರಿಂದ, ಯಾವುದೇ ಹೇಳಿಕೆ ನೀಡುವ ಮುನ್ನ ಗಂಭೀರವಾಗಿ ಯೋಚಿಸಬೇಕು. ಇಂತಹ ಹೇಳಿಕೆಗಳು ನಮ್ಮ ಹೋರಾಟಕ್ಕೆ ಅಡ್ಡಿಯಾಗುತ್ತವೆ ಎಂದರು.
 
ಪೊಲೀಸರನ್ನು ಹತ್ಯೆ ಮಾಡಿ ಎಂದು ನಾನು ಯಾವತ್ತೂ ಹೇಳಿಲ್ಲ. ಒಂದು ವೇಳೆ ನಾನು ನೀಡಿದ ಹೇಳಿಕೆ ಬಗ್ಗೆ ವಿಡಿಯೋ ಅಥವಾ ಆಡಿಯೋ ದಾಖಲೆಗಳಿದ್ದಲ್ಲಿ ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ