ಕಿರಣ್‌ ಬೇಡಿ, ಕೇಜ್ರಿವಾಲ್‌ ಬಣ್ಣ ಬಯಲಾಗಿದೆ: ದಿಗ್ವಿಜಯ್ ಸಿಂಗ್

ಭಾನುವಾರ, 25 ಜನವರಿ 2015 (12:29 IST)
ಕಿರಣ್‌ ಬೇಡಿ ಹಾಗೂ ಕೇಜ್ರಿವಾಲ್‌ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆಗಳಿವೆ. ಈ ಇಬ್ಬರು ಅಣ್ಣಾ ಹಜಾರೆ ಅವರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಈಗ ದೆಹಲಿ ಸಿಎಂ ಹುದ್ದೆಗಾಗಿ ಬೇಡಿ ಹಾಗೂ ಕೇಜ್ರಿವಾಲ್‌ ನಡುವೆ ನಡೆದಿರುವ ಕೋಳಿ ಜಗಳ ನನ್ನ ಮಾತನ್ನು ಪುಷ್ಟೀಕರಿಸುತ್ತದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿಗ್ವಿಜಯಸಿಂಗ್‌ ಹೇಳಿದರು.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಆಸೆಗಳಿಲ್ಲದ ಹೋರಾಟಗಾರರು ಎಂದು ಬಿಂಬಿಸಿಕೊಂಡಿದ್ದ ಕಿರಣ್‌ಬೇಡಿ ಹಾಗೂ ಕೇಜ್ರಿವಾಲ್‌ ಅವರ ಸತ್ಯ ಇದೀಗ ಬಯಲಾಗಿದೆ. ಅದರಲ್ಲೂ ಗುಜರಾತ್‌ ಕೋಮುಗಲಭೆ ಸಂದರ್ಭದಲ್ಲಿ ಮೋದಿ ಅವರನ್ನು ಕಟುವಾಗಿ ಟೀಕಿಸಿದ್ದ ಕಿರಣ್‌ ಬೇಡಿ ಈಗ ಮೋದಿ ಅವರನ್ನು ಹೊಗಳುತ್ತಿರುವುದು ಅವರ ನಿಜ ಬಣ್ಣ ಬಯಲು ಮಾಡಿದೆ ಎಂದರು. ಪಕ್ಷ ಸೇರಿದ ಮೊದಲ ದಿನವೇ ಕಿರಣ್‌ ಬೇಡಿ ಅವರನ್ನು ದೆಹಲಿಯ ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸುತ್ತಿದೆ. ಇದು ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇರುವುದರ ದ್ಯೋತಕ ಎಂದು ಅವರು ವ್ಯಂಗ್ಯವಾಡಿದರು.
 
ಮೋದಿ-ಯೂ ಟರ್ನ್ ಸರ್ಕಾರ: ಕಪ್ಪು ಹಣವನ್ನು ಭಾರತಕ್ಕೆ ತರುವುದು ಸೇರಿದಂತೆ ಸಾವಿರಾರು ಭರವಸೆಗಳನ್ನು ನೀಡಿ ಜನರನ್ನು ಭ್ರಮಾಧೀನರನ್ನಾಗಿ ಮಾಡಿ ಅಧಿಕಾರದ ಗದ್ದುಗೆಗೇರಿದ ನರೇಂದ್ರ ಮೋದಿ ಇದೀಗ ತಾವು ನೀಡಿದ ಎಲ್ಲಾ ಭರವಸೆಗಳಿಂದ ಹಿಂದೆ ಸರಿಯುವ ಮೂಲಕ ತಮ್ಮದು ಯೂ-ಟರ್ನ್ ಸರ್ಕಾರ ಎಂದು ತೋರಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಗಣನೀಯವಾಗಿ ಕುಸಿದಿದ್ದರೂ ಅದರ ಪ್ರಯೋಜನವನ್ನು ಜನರಿಗೆ ನೀಡುತ್ತಿಲ್ಲ ಎಂದು ಆರೋಪಿಸಿದರು.
 

ವೆಬ್ದುನಿಯಾವನ್ನು ಓದಿ