ಲಲಿತ್ ಮೋದಿ ಆರೋಪ: ಅಲ್ಲಗಳೆದ ವರುಣ್ ಗಾಂಧಿ

ಬುಧವಾರ, 1 ಜುಲೈ 2015 (12:25 IST)
ಐಪಿಎಲ್ ನ ಮಾಜಿ ಮುಖ್ಯಸ್ಥ, ಭ್ರಷ್ಟಾಚಾರ ಆರೋಪಿ ಲಲಿತ್ ಮೋದಿ ತಮ್ಮ ಮೇಲೆ ಮಾಡಿರುವ ಆರೋಪವನ್ನು ಬಿಜೆಪಿ ನಾಯಕ ವರುಣ್ ಗಾಂಧಿ ನಿರಾಕರಿಸಿದ್ದಾರೆ.
 
"ಲಂಡನ್‌ನಲ್ಲಿ ನಾನು ಲಲಿತ್ ಮೋದಿ ಅವರನ್ನು ಭೇಟಿ ಮಾಡಿದ್ದು ನಿಜ. ಆದರೆ ಅವರಿಗೆ ಸಹಾಯ ಮಾಡುತ್ತೇನೆ ಎಂದು ಯಾವುದೇ ರೀತಿಯ ಭರವಸೆ, ವಾಗ್ದಾನಗಳನ್ನು ನೀಡಿರಲಿಲ್ಲ. ಇದು ಆಧಾರ ರಹಿತ ಆರೋಪ. ವಿಷಯಾಂತರವನ್ನು ಮಾಡಲು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಲಲಿತ್ ಮೋದಿ ದಿನಕೊಬ್ಬರ ಹೆಸರನ್ನು ಅನಾವಶ್ಯಕವಾಗಿ ಎಳೆದು ತರುತ್ತಿದ್ದಾರೆ", ಎಂದು ವರುಣ್ ಗಾಂಧಿ ಆರೋಪಿಸಿದ್ದಾರೆ. 
 
ದಿನಕೊಬ್ಬ ರಾಜಕಾರಣಿಯ ಜತೆ ತಮಗೆ ಹತ್ತಿರದ ಸಂಬಂಧವಿದೆ ಎಂದು ಟ್ವೀಟ್ ಮಾಡಿ ರಾಜಕೀಯ ಕೋಲಾಹಲವನ್ನು ಸೃಷ್ಟಿ ಮಾಡುತ್ತಿರುವ ಲಲಿತ್ ಮೋದಿ , 'ಬಿಜೆಪಿ ನಾಯಕ ವರುಣ್ ಕೆಲ ವರ್ಷಗಳ ಹಿಂದೆ ನಮ್ಮ ಮನೆಗೆ ಬಂದು ದೊಡ್ಡಮ್ಮ ಸೋನಿಯಾ ಸಹಾಯದಿಂದ ನನಗಂಟಿರುವ ಎಲ್ಲ ಆರೋಪಗಳಿಂದ ಹೊರಬರಲು ಸಹಾಯ ಮಾಡುವ ಭರವಸೆ ನೀಡಿದ್ದರು. ಇದಕ್ಕಾಗಿ ನೀವು 360 ಕೋಟಿ ಹಣ ನೀಡಬೇಕು. ಇದನ್ನು ನೀವು ಸೋನಿಯಾ ಅವರ ಸಹೋದರಿಗೆ ತಲುಪಿಸಿ ಎಂದು ಹೇಳಿದ್ದರು', ಎಂದು ಟ್ವೀಟ್ ಮಾಡಿದ್ದಾರೆ. 
 
'ಈ ಆರೋಪವನ್ನು ವರುಣ್ ಒಪ್ಪಲಾರರು ಎಂದು ನನಗೆ ಗೊತ್ತು. ಅವರು ನನ್ನ ನಿವಾಸಕ್ಕೆ ಬಂದಾಗ ಜ್ಯೋತಿಷಿ ಒಬ್ಬರು ಸಹ ಉಪಸ್ಥಿತರಿದ್ದರು. ಅಲ್ಲದೇ ವರುಣ್ ಮತ್ತು ನನ್ನ ನಡುವಿನ ಮಾತುಕತೆಯ ರೆಕಾರ್ಡಿಂಗ್ ಕೂಡ ನನ್ನ ಬಳಿ ಇದೆ', ಎಂದು ಹೇಳುತ್ತದೆ ಮೋದಿ ಟ್ವೀಟ್.
 
 
ಕಾಂಗ್ರೆಸ್ ಸಹ ತಮ್ಮ ನಾಯಕಿ ಸೋನಿಯಾ ಮೇಲೆ ಬಂದಿರುವ ಆರೋಪ ನಿರಾಧಾರವೆಂದಿದೆ.

ವೆಬ್ದುನಿಯಾವನ್ನು ಓದಿ