ರಾಹುಲ್ ಗಾಂಧಿ ಜತೆಯೂ ತನ್ನ ನಂಟಿದೆ ಎಂದ ಲಲಿತ್ ಮೋದಿ

ಶನಿವಾರ, 4 ಜುಲೈ 2015 (17:56 IST)
ಐಪಿಎಲ್ ಹಗರಣದ ಆರೋಪ ಹೊತ್ತುಕೊಂಡು ದೇಶ ಬಿಟ್ಟು ಪರಾರಿಯಾಗಿ ಲಂಡನ್‌ನಲ್ಲಿ ನೆಲಸಿರುವ ಲಲಿತ್ ಮೋದಿ ಟ್ವಿಟರ್ ಮೂಲಕ ಭಾರತದ ರಾಜಕೀಯದಲ್ಲಿ ಕೋಲಾಹಲವನ್ನುಂಟು ಮಾಡುವ ಕಾಯಕವನ್ನು ಮುಂದುವರೆಸಿದ್ದಾರೆ. ದಿನಕೊಬ್ಬರಂತೆ ರಾಜಕೀಯ ಘಟಾನುಘಟಿಗಳ ಜತೆ ತಮ್ಮ ಸಂಬಂಧವನ್ನು ಬಯಲು ಮಾಡುತ್ತಿರುವ ಅವರು ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಹ ಈ ಸಾಲಿನಲ್ಲಿ ಎಳೆದು ತಂದಿದ್ದಾರೆ.

 
'ತಾವು ಐಪಿಎಲ್ ಮುಖ್ಯಸ್ಥರಾಗಿದ್ದ ಸಮಯದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ತಮ್ಮಿಂದ ಆತಿಥ್ಯ ಸ್ವೀಕರಿಸಿದ್ದರು', ಎಂದು ಅವರಿಂದು  ಟ್ವೀಟ್ ಮಾಡಿದ್ದಾರೆ.
 
ನನ್ನಿಂದ ತಾವಿಬ್ಬರು ಏನೂ ಆತಿಥ್ಯವನ್ನು ಸ್ವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿ ಎಂದು ಟ್ವೀಟ್‌ ಮೂಲಕ ರಾಹುಲ್‌ ಗಾಂಧಿ ಹಾಗೂ ಅವರ ಭಾವ ರಾಬರ್ಟ್‌ ವಾದ್ರಾಗೆ ಲಲಿತ್ ಸವಾಲೆಸೆದಿದ್ದಾರೆ. 
 
ಅಲ್ಲದೆ ತಮ್ಮಿಂದ ಆತಿಥ್ಯ ಸ್ವೀಕರಿಸಿದ್ದ ವಿಚಾರವನ್ನು ರಾಹುಲ್, ರಾಬರ್ಟ್ ಕಾಂಗ್ರೆಸ್‌ ನಾಯಕರ ಮುಂದೆ ಬಹಿರಂಗ ಪಡಿಸಿದ್ದಾರೆಯೇ ಎಂದು ತಮ್ಮ ಇನ್ನೊಂದು ಟ್ವಿಟ್‌ನಲ್ಲಿ ಅವರು ಪ್ರಶ್ನಿಸಿದ್ದಾರೆ.   
 
ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರಾ ತಮ್ಮ ಜತೆಗಿರುವ ಭಾವಚಿತ್ರವನ್ನು ಸಹ ಅವರು ಟ್ವಿಟ್ ಮಾಡಿದ್ದಾರೆ. ಇತರ ಪ್ರತಿಷ್ಠಿತ ವ್ಯಕ್ತಿಗಳ ಜತೆ ಕುಳಿತು ಗಾಂಧಿ ಮತ್ತು ವಾದ್ರಾ ಐಪಿಎಲ್ ಪಂದ್ಯವನ್ನು ವೀಕ್ಷಿಸುತ್ತಿರುವುದು ಆ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಲಲಿತ್ ಮೋದಿ ಮತ್ತು ರಾಹುಲ್ ಗಾಂಧಿ ತಮ್ಮ ತಮ್ಮ  ಫೋನ್‌ನಲ್ಲಿ ಮಾತನಾಡುತ್ತಿರುವುದು ಚಿತ್ರದಲ್ಲಿದೆ.
 
ಕಳೆದ ಕೆಲ ದಿನಗಳಿಂದ ಲಲಿತ್ ಮೋದಿ ದೇಶದ ಪ್ರಮುಖ ರಾಜಕಾರಣಿಗಳ ಜತೆ ತಮ್ಮ ಸಂಬಂಧವನ್ನು ಟ್ವಿಟ್ ಮೂಲಕ ಬಹಿರಂಗ ಪಡಿಸುತ್ತಿದ್ದಾರೆ.  

ವೆಬ್ದುನಿಯಾವನ್ನು ಓದಿ