ಬಿಜೆಪಿ ದೇಶದ್ರೋಹಿಗಳಿಗೆ ನೆರವಾಗುತ್ತಿದ್ದರೂ ಮೋದಿ ಮೌನಯೋಗ ಮಾಡುತ್ತಿದ್ದಾರೆ : ಕಾಂಗ್ರೆಸ್ ಲೇವಡಿ

ಬುಧವಾರ, 1 ಜುಲೈ 2015 (16:23 IST)
ಕೇಂದ್ರ ಸರ್ಕಾರದ ಮೇಲೆ ಆಕ್ರಮಣವನ್ನು ಮುಂದುವರೆಸಿರುವ ಕಾಂಗ್ರೆಸ್ ಲಲಿತ್ ಮೋದಿಗೆ ನೆರವು ನೀಡಿದ ಆರೋಪಗಳನ್ನು ಎದುರಿಸುತ್ತಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾರವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಕಾಂಗ್ರೆಸ್ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. 

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ವಕ್ತಾರ, ರಣದೀಪ್ ಸುರ್ಜೇವಾಲಾ, "ನಾವು ಈ ಮೊದಲು ಹೇಳಿದ್ದನ್ನೇ ಮತ್ತೆ ಪುನರಾರ್ವತಿಸುತ್ತಿದ್ದೇವೆ. ಕಾಂಗ್ರೆಸ್ ಸುಮ್ಮನಿರುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಚಾರಗಳನ್ನು ಕಾಂಗ್ರೆಸ್ ಎತ್ತುತ್ತಲೇ ಇರುತ್ತದೆ. ಆರೋಪವನ್ನೆದುರಿಸುತ್ತಿರುವ ರಾಜೇ ಮತ್ತು ಸ್ವರಾಜ್ ಅವರನ್ನು ಉನ್ನತ ಜವಾಬ್ದಾರಿಗಳಿಂದ ಕೆಳಗಿಳಿಸುವವರೆಗೂ ನಾವು ಹೋರಾಡುತ್ತಲೇ ಇರುತ್ತೇವೆ", ಎಂದಿದ್ದಾರೆ.
 
"ಬಿಜೆಪಿ ಆಡಳಿತ, ಸಚಿವರ ಯೋಗ್ಯತೆಯ ವಿಷಯದಲ್ಲಿ ಸಮಸ್ಯೆಗೆ ಸಿಲುಕಿದೆ. ಕಾಂಗ್ರೆಸ್ ಈ ಹಿಂದೆ ಮಾಡಿದಂತೆ ಕಳಂಕಿತ ಸಚಿವರನ್ನು ವಜಾ ಮಾಡುವಂತ ಧೈರ್ಯವನ್ನು ಮೋದಿ ತೋರಲು ಸಾಧ್ಯವೇ?", ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ. 
 
"ನಾವು ತಿನ್ನುವುದು ಇಲ್ಲ ( ಲಂಚ),ತಿನ್ನಲು ಬಿಡುವುದಿಲ್ಲ ಎಂದು ಮೋದಿ ಚುನಾವಣಾ ಪ್ರಚಾರದ ಸಮಯದಲ್ಲಿ ಹೇಳಿದ್ದರು.  ಆ ವಾಗ್ದಾನವನ್ನು ಉಳಿಸಿಕೊಳ್ಳಲು ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ", ಎಂದು ಸುರ್ಜೇವಾಲಾ ಟೀಕಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ