ಒಬಾಮಾ ಇಂಪ್ರೆಸ್‌ಗಾಗಿ 10 ಲಕ್ಷ ಮೌಲ್ಯದ ಸೂಟ್ ಧರಿಸಿದ ಮೋದಿ: ಲಾಲು ಲೇವಡಿ

ಶನಿವಾರ, 31 ಜನವರಿ 2015 (16:51 IST)
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸಲು ಸಿಗುವ ಯಾವ ಅವಕಾಶಗಳನ್ನು ಕೈ ಚೆಲ್ಲದ ಲಾಲು ಪ್ರಸಾದ್ ಯಾದವ್  ಈ  ಬಾರಿ ಅಮೇರಿಕಾ ಅಧ್ಯಕ್ಷ ಒಬಾಮಾ ಭೇಟಿ ಸಂದರ್ಭದಲ್ಲಿ ಧರಿಸಿದ್ದ ದುಬಾರಿ ಬೆಲೆಯ ಸೂಟ್‌ನ್ನು ಅಸ್ತ್ರವನ್ನಾಗಿಸಿಕೊಂಡಿದ್ದಾರೆ. 
 
ಒಬಾಮಾ ಜತೆಗಿನ ಸಭೆಯ ಸಂದರ್ಭದಲ್ಲಿ ಮೋದಿಯವರು ಅತ್ಯಂತ ದುಬಾರಿ ಬೆಲೆಯ ಸೂಟ್ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು  ಮೋದಿಯವರು ಬಡವರಿಗೆ ಪ್ರಮಾಣ ಮಾಡಿದ್ದಾರೆ. ಅವರು ಖಾದಿಯನ್ನು ಧರಿಸಬೇಕು ಎಂದು ಹೇಳಿದ್ದಾರೆ. 
 
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಲಾಲು, "ಪಿನ್ ಪಟ್ಟೆ ಸೂಟ್ ಬಹಳ ದುಬಾರಿ. ಇದನ್ನು ಡ್ರೈ ಕ್ಲೀನ್ ಮಾಡಿಸಲು ಬಹುಶಃ ಫ್ರಾನ್ಸ್‌ಗೆ ಕಳುಹಿಸಿರಬಹುದು", ಎಂದು ವ್ಯಂಗ್ಯವಾಡಿದ್ದಾರೆ. 
 
ನಮ್ಮ ದೇಶದ ಜನರು ಅತಿ ಬಡವರಾಗಿದ್ದಾರೆ. ನರೇಂದ್ರ ಮೋದಿಯವರು ಖಾದಿ ಬಟ್ಟೆಯನ್ನು ಧರಿಸಬೇಕು. ಅವರು  ಸರಳ ಜೀವನ ಮತ್ತು ಉನ್ನತ ಮಟ್ಟದ ಚಿಂತನೆಯನ್ನು ನಡೆಸಬೇಕು ಮತ್ತು ಕೆಲಸಕ್ಕೆ ಅಡೆತಡೆ ಒಡ್ಡುವ ವಸ್ತುಗಳಿಂದ ತಮ್ಮನ್ನು ತಾವು ದೂರವಿರಿಸಿಕೊಳ್ಳಬೇಕು ಎಂದು ಲಾಲು ಹೇಳಿದ್ದಾರೆ. 
 
ತಾವು ಯಾರಿಗಿಂತ ಕಡಿಮೆ ಇಲ್ಲ ಎಂಬುದನ್ನು ತೋರಿಸಿ, ಒಬಾಮಾಗೆ ಇಂಪ್ರೆಸ್ ಮಾಡಲು ಮೋದಿ ಅವರೆದುರು ಪಿನ್ ಪಟ್ಟೆ ಸೂಟ್‌ ಧರಿಸಿ ಕಾಣಿಸಿಕೊಂಡರು ಎಂದು ಲಾಲು ಅಣಕವಾಡಿದ್ದಾರೆ. 
 
ಮೋದಿ ತಾವೇ ಆ ಬಟ್ಟೆಯನ್ನು ಹೊಲಿಸಿಕೊಂಡರೋ ಅಥವಾ ಬೇರೆ ಯಾರಾದರೂ ಅವರಿಗದನ್ನು ಉಡುಗೊರೆಯಾಗಿ ಕೊಟ್ಟರೋ ಎಂಬುದು ತಮಗಿನ್ನು ಖಚಿತವಾಗಿಲ್ಲ ಎಂದು ಲಾಲು ಹೇಳಿದ್ದಾರೆ .

ವೆಬ್ದುನಿಯಾವನ್ನು ಓದಿ