ಲಾಲು ಪ್ರಸಾದ್ ಯಾದವ್ ನಿವೃತ್ತ ಕಾಮೆಡಿಯನ್: ಚಿರಾಗ್ ಪಾಸ್ವಾನ್

ಸೋಮವಾರ, 18 ಆಗಸ್ಟ್ 2014 (14:58 IST)
ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಅವರನ್ನು ಕಿಚಾಯಿಸಿರುವ ಲೋಕ ಜನಶಕ್ತಿ ಪಕ್ಷದ ಉಪಾಧ್ಯಕ್ಷ ಚಿರಾಗ್ ಪಾಸ್ವಾನ್, ಅವರೊಬ್ಬ ನಿವೃತ್ತ  ಹಾಸ್ಯಗಾರ  ಎಂದು ಅಣಕಿಸಿದ್ದಾರೆ. 

ತನ್ನ ತಂದೆ ಮತ್ತು ಲೋಕ ಜನಶಕ್ತಿ  ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಲಾಲು ಅವಕಾಶವಾದಿ, ಸಮಯಸಾಧಕ ಎಂದು ಜರಿದ ಒಂದು ದಿನದ ಬಳಿಕ ಚಿರಾಗ್ ಈ ರೀತಿ ವ್ಯಂಗ್ಯವಾಡಿದ್ದಾರೆ.
 
ಲಾಲು ಟೀಕೆಗೆ ಪ್ರತಿಕ್ರಿಯೆ ನೀಡುತ್ತ ಮಾತಿಗಿಳಿದ ಅವರು  ಚುನಾವಣೆಯ ಸಂದರ್ಭದಲ್ಲಿ ಲಾಲು ಹಾಸ್ಯ ಚಟಾಕಿಗಳ ಜತೆ ಪ್ರಚಾರಕ್ಕಿಳಿಯುತ್ತಾರೆ.  ಆದರೆ ತಾವೊಬ್ಬ ನಿವೃತ್ತ ಹಾಸ್ಯಗಾರ ಎಂಬುದು ಅವರಿಗೆ ಅರಿವಿರಬೇಕು ಎಂದು ಹೇಳಿದ್ದಾರೆ. 
 
ಲಾಲು ಪ್ರಸಾದರ ಕಟು ಮಾತಿಗೆ  ತಿರುಗುತ್ತರ ನೀಡಿರುವ  ಕೇಂದ್ರ ಮಂತ್ರಿ ರಾಮ್ ವಿಲಾಸ್ ಪಾಸ್ವಾನ್, ಲಾಲು ಒಂದು ಕಾಲಕ್ಕೆ ತಮ್ಮ ಕಡು ವೈರಿಯಾಗಿದ್ದು, ಈಗ ಮಿತ್ರನಾಗಿ ಪರಿವರ್ತಿತರಾಗಿರುವ ನಿತೀಶ್ ಕುಮಾರ್ ಅವರ ಜತೆಗಿನ ರಾಜಕೀಯ ಮೈತ್ರಿಯ ಬಗ್ಗೆ ವಿವರಿಸುವಂತೆ ಸವಾಲೆಸೆದಿದ್ದಾರೆ. 
 
ವರದಿಗಾರರ ಜತೆ ಮಾತನಾಡುತ್ತಿದ್ದ ಪಾಸ್ವಾನ್ ನನ್ನನ್ನು ಅವಕಾಶವಾದಿ ಎಂದು ಕರೆಯುವ ಬದಲು  ತಾವು ಕಳೆದ 20 ವರ್ಷಗಳಿಂದ ಸಿಕ್ಕ ಸಿಕ್ಕ ಪದಪ್ರಯೋಗಗಳ ಮೂಲಕ ಜರಿಯುತ್ತಿದ್ದ ಕಡು ವೈರಿ ನಿತೀಶ್ ಕುಮಾರ್ ಜತೆ  ಕೈ ಜೋಡಿಸಿದ್ಯಾಕೆ ಎಂಬುದಕ್ಕೆ ಲಾಲು ಉತ್ತರಿಸಲಿ ಎಂದು ಹೇಳಿದ್ದಾರೆ. 
 
ತಮ್ಮದೇ ಆದ ಸಿದ್ಧಾಂತಗಳ ಸರಕನ್ನು ಇಟ್ಟುಕೊಳ್ಳದ ಪಾಸ್ವಾನ್ , ರಾಜಕೀಯ ಅವಶ್ಯಕತೆಗಳಿಗನುಗುಣವಾಗಿ ತನ್ನ ನೀತಿಗಳನ್ನು ಬದಲಾಯಿಸುವ  ಸಮಯ ಸಾಧಕ ಎಂದು ಲಾಲು ಆರೋಪಿಸಿದ್ದರು. 

ವೆಬ್ದುನಿಯಾವನ್ನು ಓದಿ