ವೈಫಲ್ಯಗಳನ್ನು ಮರೆಮಾಚಲು ಲಾಲು ಯಾದವ್ ಕುತಂತ್ರ: ರಾಜನಾಥ್ ಸಿಂಗ್

ಶನಿವಾರ, 10 ಅಕ್ಟೋಬರ್ 2015 (14:23 IST)
ಗೋಮಾಂಸ ಸೇವನೆ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಿದ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಲಾಲು ತಮ್ಮ ವೈಫಲ್ಯಗಳತ್ತ ಜನರ ಗಮನ ಹರಿಯದಿರಲು ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 
ಬಿಹಾರ್‌ನಲ್ಲಿ ನಡೆಯಲಿರುವ ಚುನಾವಣೆ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಷಡ್ಯಂತ್ರ ರೂಪಿಸುವುದು ಸರಿಯಲ್ಲ. ಒಂದು ವೇಳೆ ನೀವು ಚರ್ಚಿಸಬೇಕು ಎಂದು ಬಯಸಿದಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಏಳಿಗೆಯ ಬಗ್ಗೆ ಚರ್ಚಿಸಿ ಎಂದು ತಿರುಗೇಟು ನೀಡಿದ್ದಾರೆ. 
 
ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಮತ್ತು ಬಿಹಾರ್ ಸಿಎಂ ನಿತೀಶ್ ಕುಮಾರ್ ಯಾದವ್ ತಮ್ಮ ಅಧಿಕಾರವಧಿಯಲ್ಲಿ ಯಾವ ರೀತಿ ರಾಜ್ಯವನ್ನು ಅಭಿವೃದ್ಧಿಪಡಿಸಿದ್ದಾರೆ ಎನ್ನುವ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ಅದನ್ನು ಬಿಟ್ಟು ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸಿ ವೈಫಲ್ಯ ಮುಚ್ಚಿಕೊಳ್ಳುವುದು ಬೇಡ ಎಂದು ರಾಜನಾಥ್ ಸಿಂಗ್ ಕಿಡಿಕಾರಿದ್ದಾರೆ. 
 
ಇದಕ್ಕಿಂತ ಮೊದಲು ಪ್ರಧಾನಿ ಮೋದಿ, ಹಿಂದುಗಳು ಕೂಡಾ ಗೋಮಾಂಸ ಸೇವನೆ ಮಾಡುತ್ತಾರೆ ಎನ್ನುವ ಲಾಲು ಹೇಳಿಕೆ ಯಾದವ ಕುಲಕ್ಕೆ ಕಳಂಕ ತರುವಂತಹದಾಗಿದೆ. ಜನತಾ ಪರಿವಾರವನ್ನು ಚುನಾವಣೆಯಲ್ಲಿ ಸೋಲಿಸಿ. ಇಲ್ಲವಾದಲ್ಲಿ ರಾಜ್ಯದಲ್ಲಿ ಮತ್ತೆ ಜಂಗಲ್ ರಾಜ್ ತಾಂಡವವಾಡುತ್ತದೆ ಎಂದು ಲಾಲು ವಿರುದ್ಧ  ಗುಡುಗಿದ್ದರು.

ವೆಬ್ದುನಿಯಾವನ್ನು ಓದಿ