ಮೋದಿಯನ್ನು ಬಿಹಾರದಿಂದ ಹೊರಹಾಕದಿದ್ರೆ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ : ಲಾಲು

ಸೋಮವಾರ, 28 ಏಪ್ರಿಲ್ 2014 (16:23 IST)
ಬಿಹಾರದಿಂದ ಮೋದಿಯನ್ನು ಹೊರಹಾಕಲು ಸಾಧ್ಯವಾಗದಿದ್ದರೆ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ಸಿದ್ಧರಾಗಿರುವುದಾಗಿ ಆರ್‌ಜೆಡಿ ನಾಯಕ ಲಾಲು ಪ್ರಸಾದ ಯಾದವ್ ಬಹಿರಂಗ ಸವಾಲನ್ನು ಹಾಕಿದ್ದಾರೆ. 
 
ದೇಶದಲ್ಲಿ ಮೋದಿ ಅಲೆ ಬಿರುಸಾಗಿದೆ ಎಂಬ ಭಾರತೀಯ ಜನತಾಪಕ್ಷದ ಪ್ರತಿಪಾದನೆಯ  ಹೊರತಾಗಿಯೂ ಬಿಹಾರದ ಪ್ರಮುಖ ನಾಯಕರಾದ ಮುಖ್ಯಮಂತ್ರಿ ಮತ್ತು ಜೆಡಿ (ಯು) ನಾಯಕ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ  ಲಾಲು ಪ್ರಸಾದ ಯಾದವ್ ಇದನ್ನು ನಂಬಲು ಸಿದ್ಧರಿಲ್ಲ.  
 
"ಮೋದಿಯನ್ನು ತಮ್ಮ ರಾಜ್ಯದಿಂದ ಹೊರಹಾಕಲು ಸಾಧ್ಯವಾಗದಿದ್ದರೆ ನಾನು ನನ್ನ ಹೆಸರನ್ನು ಬದಲಾಯಿಸಿಕೊಳ್ಳಲು ತಯಾರಿದ್ದೇನೆ" ಎನ್ನುವುದರ ಮೂಲಕ ಲಾಲು ತಮ್ಮ ರಾಜ್ಯದಲ್ಲಿ ಬಿಜೆಪಿಗೆ ಸೋಲುಣಿಸಲು ತೊಡೆ ತಟ್ಟಿ ನಿಂತಿದ್ದಾರೆ. 
 
ಲಾಲು ನೇತೃತ್ವದ ಪಕ್ಷ ಪ್ರಸಕ್ತ ಚುನಾವಣೆಯಲ್ಲಿ ಕೇವಲ 3 ಸ್ಥಾನಗಳನ್ನು ಗಳಿಸಲಿದೆ ಎಂಬ ಮಾಧ್ಯಮ ಸಮೀಕ್ಷೆಯ ವರದಿಯೊಂದು ಪ್ರಕಟವಾದ ಸಂದರ್ಭದಲ್ಲಿ ಲಾಲು ಈ ರೀತಿಯಾಗಿ ಹೇಳಿದ್ದಾರೆ. 
 
ದಿನಪತ್ರಿಕೆಯೊಂದರ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು ತಮ್ಮ ಪಕ್ಷ ಎಲ್ಲ 40 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.  
 
ಬಿಜೆಪಿ ಮೋದಿ ಹೆಸರಿನಲ್ಲಿ ಸುಳ್ಳು ಪ್ರಚಾರ ರಚಿಸುತ್ತಿದೆ. 2004ರಲ್ಲಿ "ಭಾರತ ಬೆಳಗುತಿದೆ" ಎಂದು ಘೋಷಿಸಿಕೊಂಡು ಚುನಾವಣೆ ಎದುರಿಸಿದ್ದ ಬಿಜೆಪಿ ಹೀನಾಯ ಸೋಲನ್ನು ಕಂಡಿತ್ತು ಎಂದು ಅವರು ಹೇಳಿದರು. 
 
ಮೋದಿ ಅಲೆ ಎನ್ನುವುದು ಮಾಧ್ಯಮಗಳ ಸೃಷ್ಟಿ,  ಮೇ 16 ರಂದು ಚುನಾವಣಾ ಫಲಿತಾಂಶ ಬಂದಾಗ ಆ ಬಲೂನು ಸಾರ್ವಜನಿಕವಾಗಿ  ಒಡೆದು ಹೋಗಲಿದೆ ಎಂದು ಲಾಲು ವ್ಯಂಗ್ಯವಾಡಿದರು. 

ವೆಬ್ದುನಿಯಾವನ್ನು ಓದಿ