ಬಿಹಾರ್: ನಿತೀಶ್ ಸರಕಾರಕ್ಕೆ ಬೆಂಬಲ ನೀಡಲು ಲಾಲು ಚಿಂತನೆ

ಭಾನುವಾರ, 18 ಮೇ 2014 (15:42 IST)
ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜಿನಾಮೆಯಿಂದಾಗಿ ಅತಂತ್ರ ಸ್ಥಿತಿಯಲ್ಲಿರುವ ಜೆಡಿಯು ಸರ್ಕಾರಕ್ಕೆ ಲಾಲು ಪ್ರಸಾದ್ ಅವರ ಆರ್‌ಜೆಡಿ ಪಕ್ಷ ಬೆಂಬಲ ನೀಡುವ ಸಾಧ್ಯತೆ ಇದೆ.
 
ಬಿಹಾರದ ಜೆಡಿಯು ಸರ್ಕಾರಕ್ಕೆ ಇನ್ನು 12 ತಿಂಗಳವರೆಗೂ ಅವಧಿ ಇದ್ದು, ಮುಂದಿನ ವರ್ಷ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆದರೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಆಡಳಿತಾ ರೂಢಾ ಜೆಡಿಯು ತೀರಾ ಕಳಪೆ ಸಾಧನೆಯಿಂದಾಗಿ ನೈತಿಕ ಹೊಣೆ ಹೊತ್ತಿರುವ ನಿತೀಶ್ ಕುಮಾರ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅಲ್ಲದೆ ತಮ್ಮ ಸಚಿವ ಸಂಪುಟವನ್ನು ವಿಸರ್ಜಿಸಿದ್ದರು.
 
ಇದೀಗ ಬಿಹಾರ ಸರ್ಕಾರ ಅತಂತ್ರದಲ್ಲಿದ್ದು, ಅಲ್ಪ ಮತಕ್ಕೆ ಕುಸಿದಿರುವ ಜೆಡಿಯು ಪಕ್ಷಕ್ಕೆ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಪಕ್ಷ ಬೆಂಬಲ ನೀಡಲು ಮುಂದಾಗಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಹೇಳಿಕೆಗಳು ಹೊರಬೀಳದಿದ್ದರೂ, ಮೂಲಗಳ ಪ್ರಕಾರ ನಾಳೆ ಆರ್‌ಜೆಡಿ ಮುಖಂಡರು ಸಭೆ ನಡೆಸಲಿದ್ದಾರೆ. ಸಭೆ ಬಳಿಕೆ ಜೆಡಿಯುಗೆ ಬೆಂಬಲ ನೀಡುವ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
 
ಇದಕ್ಕೆ ಇಂಬು ನೀಡುವಂತೆ ಜೆಡಿಯು ಕಾರ್ಯದರ್ಶಿ ಕೆ.ಸಿ.ತ್ಯಾಗಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ 24 ಗಂಟೆಗಳಿಂದ ನಾನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶೀಘ್ರದಲ್ಲಿಯೇ ಆರ್‌ಜೆಡಿ ಪಕ್ಷ ಸರ್ಕಾರದೊಂದಿಗೆ ಕೈಜೋಡಿಸಲಿದೆ ಎಂದು ಹೇಳಿದರು. 
 
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು, ಸರ್ಕಾರ ಬೆಂಬಲ ನೀಡುವ ಕುರಿತು ನಾನು ಶರದ್ ಯಾದವ್ ಅವರೊಂದಿಗೆ ಮಾತನಾಡಿಲ್ಲ. ನಾಳೆ ಪಕ್ಷ ಸಭೆ ಇದ್ದು, ಪಕ್ಷದ ನಿರ್ಧಾರವನ್ನು ನಾಳೆ ಪ್ರಕಟಿಸುವುದಾಗಿ ಹೇಳಿದರು.
 
ಅಂತೆಯೇ ಲಾಲು ಪ್ರಸಾದ್ ಅವರು ಜೆಡಿಯು ಸರ್ಕಾರಕ್ಕೆ ಬೆಂಬಲ ನೀಡಿಕೆ ಪ್ರಸ್ತಾಪವನ್ನು ನಿರಾಕರಿಸಿಲ್ಲ. ಹೀಗಾಗಿ ನಿತೀಶ್ ಕುಮಾರ್ ಅವರ ರಾಜಿನಾಮೆಯ ನಂತರವೂ ಬಿಹಾರ ಸರ್ಕಾರಕ್ಕೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
 

ವೆಬ್ದುನಿಯಾವನ್ನು ಓದಿ