ಜನತಾ ಪರಿವಾರ ಅಧಿಕಾರಕ್ಕೆ ಬಂದ್ರೆ ಲಾಲು ರಿಮೋಟ್ ಕಂಟ್ರೋಲ್: ಪ್ರಧಾನಿ ಮೋದಿ

ಶನಿವಾರ, 10 ಅಕ್ಟೋಬರ್ 2015 (14:39 IST)
ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಜನತಾ ಪರಿವಾರ ಅಧಿಕಾರಕ್ಕೆ ಬಂದಲ್ಲಿ ಲಾಲು ಯಾದವ್ ರಿಮೋಟ್ ಕಂಟ್ರೋಲ್‌ನಂತೆ ವರ್ತಿಸಿ, ಮತ್ತೆ ರಾಜ್ಯದಲ್ಲಿ ಜಂಗಲ್ ರಾಜ್ ಹೆಚ್ಚಳವಾಗಲು ಕಾರಣವಾಗುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.  
 
ಸೇಸಾರಾಮ್ ಮತ್ತು ಔರಂಗಾಬಾದ್ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ಮೋದಿ, ನಿತೀಶ್ ಕುಮಾರ್, ಲಾಲು ಪ್ರಸಾದ್ ಮತ್ತು ಸೋನಿಯಾ ಗಾಂಧಿ ತಮ್ಮ 60 ವರ್ಷ ಅಧಿಕಾರದ ವಿವರಣೆಯನ್ನು ಜನತೆಗೆ ನೀಡಿಲ್ಲ. ಚುನಾವಣೆ ಪ್ರಚಾರದಲ್ಲಿ ಕೇವಲ ನನ್ನನ್ನು ಟೀಕಿಸುವುದನ್ನು ಬಿಟ್ಟು ಅಭಿವೃದ್ಧಿಯ ಪರ ಒಂದೇ ಒಂದು ಭಾಷಣ ಮಾಡಿಲ್ಲ ಎಂದು ಲೇವಡಿ ಮಾಡಿದರು.
 
ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ತಾವು ಚುನಾವಣೆಗೆ ಸ್ಪರ್ಧಿಸುವಂತಿಲ್ಲವಾದ್ದರಿಂದ ಜನತಾಪರಿವಾರದೊಂದಿಗೆ ಮೈತ್ರಿ ಮಾಡಿಕೊಂಡು ರಿಮೋಟ್ ಕಂಟ್ರೋಲ್ ಆಗಲು ಬಯಸಿದ್ದಾರೆ. ಸರಕಾರವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಬಿಗ್ ಬಾಸ್‌ನಂತಾಗಿ ತಮ್ಮ ತಾಳಕ್ಕೆ ಸರಕಾರ ಕುಣಿಯಬೇಕು ಎಂದು ಬಯಸಿದ್ದಾರೆ ಎಂದು ಕಿಡಿಕಾರಿದರು.
 
ಲಾಲು ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಅಪರಾಧಿಯಾಗಿದ್ದರಿಂದಲೇ ಅವರನ್ನು ಚುನಾವಣೆಗೆ ನಿಲ್ಲುವುದರಿಂದ ಬಹಿಷ್ಕಾರ ಹಾಕಲಾಗಿದೆ ಎಂದು ಮತದಾರರಿಗೆ ನೆನಪಿಸಿದರು.
 
ಜಂಗಲ್ ರಾಜ್ ಬಗ್ಗೆ ಆರೋಪಿಸಿದಾಗ ಬಿಹಾರ್ ಸಿಎಂ ನಿತೀಶ್ ಕುಮಾರ್‌ ವಿಚಲಿತರಾಗುತ್ತಾರೆಯೇ ಹೊರತು ಲಾಲು ಯಾದವ್ ಅಲ್ಲ. ಲಾಲು ಪ್ರಸಾದ್ ಯಾದವ್ ಅಧಿಕಾರವಧಿಯಲ್ಲಿ ಜಂಗಲ್ ರಾಜ್ ಅಧಿಕಾರವಿತ್ತು ಎಂದು ಹಿಂದೆ ಆರೋಪಿಸಿದ್ದ ನಿತೀಶ್ ಕುಮಾರ್ ಇದೀಗ, ಜಂಗಲ್ ರಾಜ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಬಿಹಾರ್ ರಾಜ್ಯಕ್ಕೆ ಮತ್ತೊಂದು ಬಾರಿ ಜಂಗಲ್ ರಾಜ್ ಅಗತ್ಯವಿದೆಯೇ ಎಂದು ಪ್ರಧಾನಿ ಮೋದಿ ಮತದಾರರನ್ನು ಪ್ರಶ್ನಿಸಿದರು. 

ವೆಬ್ದುನಿಯಾವನ್ನು ಓದಿ