ಕತ್ತೆ ಗಾಡಿಯಾಗಿ ಬದಲಾದ ಅತಿ ದುಬಾರಿ ಕಾರ್ ಲ್ಯಾಂಡ್ ಕ್ರೂಸರ್

ಸೋಮವಾರ, 6 ಜುಲೈ 2015 (12:08 IST)
ಅತಿ ದುಬಾರಿ ಕಾರ್ ಲ್ಯಾಂಡ್ ಕ್ರೂಸರ್ ಬಗ್ಗೆ ನಿಮಗೆ ತಿಳಿದಿರಲಿಕ್ಕೆ ಸಾಕು. ನಮ್ಮ ದೇಶದಲ್ಲಿ ಕೇವಲ 20 ಮಂದಿ ಈ ಕಾರನ್ನು ಹೊಂದಿದ್ದಾರೆ. ಈ ಕಾರ್ ವಿಷಯ ಈಗೇಪ್ಪಾ ಅಂತೀರಾ. ಇತ್ತೀಚಿಗಷ್ಟೇ ಈ ಕಾರನ್ನು ಕೊಂಡಿದ್ದ  ಗುಜರಾತ್‍ ಉದ್ಯಮಿಯೊಬ್ಬರು ಕತ್ತೆಗಳ ಮೂಲಕ ಕಾರನ್ನು ಎಳೆಸಿ ಸುದ್ದಿಯಲ್ಲಿದ್ದಾರೆ. 
 
ಸೂರತ್‌ ಉದ್ಯಮಿ ತುಷಾರ್ ಗಿಲಾನಿ ಕಳೆದ ಒಂದು ತಿಂಗಳ ಹಿಂದೆ 1 ಕೋಟಿ, 5 ಲಕ್ಷ ರೂಪಾಯಿ ನೀಡಿ ಲ್ಯಾಂಡ್ ಕ್ರೂಸರ್ ಕಾರನ್ನು ಖರೀದಿಸಿದ್ದರು. ಆದರೆ ಕಾರ್ ಕೊಂಡು ವಾರಗಳಾಗುವಷ್ಟರಲ್ಲೇ ಹಲವು ಸಮಸ್ಯೆಗಳು ಉದ್ಭವಿಸತೊಡಗಿದೆ. 
 
ಕಾರಿನ ಕೀ ಲಾಕ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಬ್ಯಾಟರಿ ಕೈಕೊಟ್ಟಿತು. ನಂತರ ಒಂದಾದರೊಂದರಂತೆ ಹಲವು ಸಮಸ್ಯೆಗಳು ಎದುರಾಗ ತೊಡಗಿದವು. ಡೀಲರ್‌ಗಳು ಸಹ ಅವರ ಸಮಸ್ಯೆಗೆ ಸರಿಯಾಗಿ ಸ್ಪಂದಿಸಲೇ ಇಲ್ಲ. ಅಷ್ಟೊಂದು ದುಬಾರಿ ಬೆಲೆಯ ಕಾರ್ ಪದೇ ಪದೇ ಕೈ ಕೊಡುತ್ತಿರುವುದು ಮತ್ತು ಡೀಲರ್‌ಗಳ ನಿರ್ಲಕ್ಷ ತುಷಾರ್ ಅವರನ್ನು ಕೆರಳಿಸಿತು. 
 
ತಾಳ್ಮೆ ಕಳೆದುಕೊಂಡ ಅವರು ಡೀಲರ್‌ಗಳ ವಿರುದ್ಧ ಪ್ರತಿಭಟಿಸಿದ್ದು ಮಾತ್ರ ವಿನೂತನವಾಗಿ. ಕೆಟ್ಟ ಸರ್ವಿಸ್‍ಗೆ ಬೇಸತ್ತ ಇವರು 1 ಕೋಟಿಯ ಕಾರನ್ನು ಕತ್ತೆಯ ಮೂಲಕ ಎಳೆಸಿಕೊಂಡು ಶೋರೂಂಗೆ ಸಾಗಿದ್ದಾರೆ. 
 
"ಪ್ರತಿವರ್ಷ  ಕಾರಿನ ವಿಮೆಗಾಗಿಯೇ 8 ಲಕ್ಷ ರೂಪಾಯಿ ಪಾವತಿ ಮಾಡುತ್ತೇನೆ. ಆದರೆ ಡೀಲರ್‍ ನೀಡುತ್ತಿರುವ ಸರ್ವೀಸ್ ನನ್ನನ್ನು ಈ ಕೃತ್ಯಕ್ಕೆ ಕೈ ಹಾಕುವಂತೆ ಮಾಡಿದೆ.  ಈ ಕಾರ್ ಬದಲು 'ನ್ಯಾನೋ' ಖರೀದಿಸಿದ್ದರೆ ಚೆನ್ನಾಗಿ ಓಡುತ್ತಿತ್ತೇನೋ", ಎಂದು ತುಷಾರ್ ಅಸಮಾಧಾನವನ್ನು ಹೊರ ಹಾಕಿದ್ದಾರೆ. 
 
5 ವರ್ಷದ ಹಿಂದೆ ಭಾರತದಲ್ಲಿ ಬಿಡುಗಡೆ ಆಗಿರುವ ಈ ಕಾರ್ ಭಾರತದಲ್ಲಿ ಕೇವಲ 20 ಜನರ ಬಳಿ ಇದೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ಕಾರ್ ಬಳಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ