ಕೊನೆಯ ಮತ್ತು 9 ನೇ ಹಂತದ ಮತದಾನಕ್ಕೆ ಚಾಲನೆ

ಸೋಮವಾರ, 12 ಮೇ 2014 (10:42 IST)
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಸ್ಪರ್ಧಿಸಿರುವ  ಹೈ ಪ್ರೊಫೈಲ್  ಆಖಾಡ ವಾರಣಾಸಿ ಸೇರಿದಂತೆ 3 ರಾಜ್ಯಗಳ 41 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಎಲ್ಲೆಡೆ ಬೆಳಿಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
 
2014 ಲೋಕಸಭಾ ಚುನಾವಣೆ 9 ಹಂತಗಳಲ್ಲಿ ನಡೆದಿದ್ದು, ಇಂದು ಕೊನೆಯ ಹಂತದ ಮತದಾನ ನಡೆಯುತ್ತಿದೆ. ಉತ್ತರಪ್ರದೇಶ್, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಣಕ್ಕಿಳಿದಿರುವ 606 ಅಭ್ಯರ್ಥಿಗಳ ಭವಿಷ್ಯವನ್ನು ಸುಮಾರು 9 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. 
 
ಉತ್ತರ ಪ್ರದೇಶದಲ್ಲಿ ವಾರಣಾಸಿಯು ಸೇರಿದಂತೆ 18 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು,  ಪಶ್ಚಿಮ ಬಂಗಾಳದಲ್ಲಿ 17 ಸ್ಥಾನಗಳಿಗೆ, ಪಕ್ಕದ ಬಿಹಾರ್‌ನಲ್ಲಿ 6 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 
 
ಇತರೆ ಪ್ರಮುಖ ಅಭ್ಯರ್ಥಿಗಳೆಂದರೆ ಅಝಮ್‌ಘರ್ ನಿಂದ ಸ್ಪರ್ಧಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಕೇಂದ್ರ ಸಚಿವ ಅಧಿರ್ ರಂಜನ್ ಚೌಧರಿ, ಬಿಜೆಪಿ ನಾಯಕ ಜಗದಾಂಬಿಕಾ ಪಾಲ್, ಕೇಂದ್ರ ಸಚಿವ ಆರ್‌ಪಿಎನ್ ಸಿಂಗ್ ಮತ್ತು ಮಾಜಿ ಸಚಿವ ಮತ್ತು ಆರ್‌ಜೆಡಿ ನಾಯಕ ರಘುವಂಶ್ ಪ್ರಸಾದ್ ಸಿಂಗ್.
 
ಕಳೆದ ಎಂಟು ಹಂತಗಳಲ್ಲಿ ಶೇಕಡಾ 66 ಸರಾಸರಿ ಮತದಾನ ದಾಖಲಾಗಿದ್ದು, 1984 ರಲ್ಲಿ ದಾಖಲಾದ 66,27 ಪ್ರತಿಶತ ಮತದಾನದ ರಿಕಾರ್ಡ್ ಈ ಬಾರಿ ಅಳಿಸಿ ಹೋಗಬಹುದು ಎಂದು ಭಾವಿಸಲಾಗಿದೆ.  2009 ರ ಚುನಾವಣೆಯಲ್ಲಿ  57,94 ಪ್ರತಿಶತ ಮತದಾನವಾಗಿತ್ತು.  
 
ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ  ಮೋದಿ ನೇತೃತ್ವದ ಬಿಜೆಪಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ. ಆದರೆ ಅದು ತನ್ನ ಮಿತ್ರ ಪಕ್ಷಗಳೊಂದಿಗೆ ಬಹುಮತವನ್ನು ಪಡೆಯುವುದೇ ಎಂಬುದು ಮೇ 16 ರಂದು ನಿರ್ಧಾರವಾಗಲಿದೆ. 

ವೆಬ್ದುನಿಯಾವನ್ನು ಓದಿ