ಮಾಜಿ ರಾಷ್ಟ್ರಪತಿ ಕಲಾಂ ನರೇಗಾ ಕಾರ್ಮಿಕರಂತೆ, ವಿವಾಹವೂ ಆಗಿದೆಯಂತೆ!

ಶುಕ್ರವಾರ, 5 ಫೆಬ್ರವರಿ 2016 (10:08 IST)
ಕ್ಷಿಪಣಿ ಮನುಷ್ಯ ಎಂದು ಖ್ಯಾತರಾಗಿರುವ ಮಹಾನ್ ವಿಜ್ಞಾನಿ, ಜನರ ರಾಷ್ಟ್ರಪತಿ ದಿವಂಗತ ಡಾಕ್ಟರ್. ಎಪಿಜೆ ಅಬ್ದುಲ್ ಕಲಾಂ ಅವರಿಗೆ ರಾಜಸ್ಥಾನ ಕಾರ್ಮಿಕ ಇಲಾಖೆಯಿಂದ ಅವಮಾನವಾಗಿದೆ. ಇಲಾಖೆ ಅವರಿಗೆ ಸಾಮಾನ್ಯ ಕಾರ್ಮಿಕನ ಸ್ಥಾನ ನೀಡಿದೆ. ಅಷ್ಟೇ ಅಲ್ಲದೆ ಅವರು ವಿವಾಹಿತರಾಗಿದ್ದು ಪತ್ನಿಯ ಹೆಸರು ಸಾರಗ್ ಬಾಯಿ ಎಂದಿದೆ. ಇಲಾಖೆಯ ಪ್ರಕಾರ ಭಾರತ ರತ್ನ ಅಗರಿ ಗ್ರಾಮದ ನಿವಾಸಿಯಂತೆ. 

ಇದೇನಿದು ಎಡವಟ್ಟು ಅಂತೀರಾ? ಎಡವಟ್ಟು ಅಷ್ಟೇ ಅಲ್ಲ. ಅದಕ್ಕಿಂತ ಘೋರ ಕುಕೃತ್ಯವಿದು. ದೇಶದ ಹೆಮ್ಮೆಯ ಪುತ್ರನ ಹೆಸರನ್ನು  ಭೃಷ್ಟಾಚಾರವನ್ನೆಸಗಲು ಬಳಸಿ ಅಪಮಾನ ಮಾಡಿದ ಪ್ರಸಂಗವಿದು. ಹೌದು ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹಣ ಲೂಟಿ ಮಾಡಲೆಂದು ಈ ರೀತಿ ಕಲಾಂ ಅವರ ನಕಲಿ ಗುರುತಿನ ಚೀಟಿ ಬಿಡುಗಡೆಗೊಳಿಸಲಾಗಿದೆ. 100 ದಿನ ಕೆಲಸ ಮಾಡಿದ್ದಾರೆ ಎಂದು ಹಣ ಕೂಡ ಸಂದಾಯವಾಗಿದೆ.
 
ಅಷ್ಟೇ ಅಲ್ಲದೆ ಇತರ ಹಲವು ಮಾಹಿತಿಗಳನ್ನು ಸಹ ಕಾರ್ಡ್ ಹೊಂದಿದೆ. ಅದರಲ್ಲಿ ನಮೂದಿಸಲಾಗಿರುವ ಮೊಬೈಲ್ ಸಂಖ್ಯೆ ನಾಟ್ ರಿಚೇಬಲ್ ಆಗಿದೆ. ಗುರುತಿನ ಪತ್ರದಲ್ಲಿ ನಮ್ಮ ಕಲಾಂ ಅವರದೇ ಭಾವಚಿತ್ರವಿದ್ದು, ತಂದೆಯ ಹೆಸರು ಪಿಜೆ ಎಂದು ನಮೂದಿಸಲಾಗಿದೆ. ಜನ್ಮದಿನಾಂಕ ಜನವರಿ 1, 1965 ಎಂದಿದ್ದು ಅದರ ಪ್ರಕಾರ ಕಲಾಂ ವಯಸ್ಸು 51 ವರ್ಷ.
 
ಪ್ರತಿ ಗುರುತಿನ ಚೀಟಿ ಕಾರ್ಮಿಕ ಇಲಾಖೆಯ ಅನುಮೋದನೆ ಪಡೆದುಕೊಂಡೇ ಹೊರಬರುತ್ತದೆಯಾದ್ದರಿಂದ ಈ ಅನುಚಿತ ಕೆಲಸವೀಗ ರಾಜಸ್ಥಾನ ಸರ್ಕಾರವನ್ನು ಪೇಚಿಗೆ ಸಿಲುಕಿದೆ.

ವೆಬ್ದುನಿಯಾವನ್ನು ಓದಿ