ಕೋರ್ಟ್‌ನಲ್ಲಿ ಪತ್ರಕರ್ತರ ಮೇಲೆ ದಾಳಿ ನೇತೃತ್ವ ವಹಿಸಿದ್ದ ವಕೀಲನ ಬಂಧನ

ಗುರುವಾರ, 25 ಫೆಬ್ರವರಿ 2016 (16:28 IST)
ಪಟಿಯಾಲಾ ಕೋರ್ಟ್ ಆವರಣದಲ್ಲಿ ಪತ್ರಕರ್ತರು, ಜೆಎನ್‌ಯು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಜೆಎನ್‌ಯುಎಸ್‌ಯು ಅಧ್ಯಕ್ಷ ಕನ್ಹೈಯ್ಯಾ ಕುಮಾರ್ ಅವರ ಮೇಲೆ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ದಾಳಿ ನಡೆಸಿದ್ದ ಗುಂಪಿನ ನೇತೃತ್ವ ವಹಿಸಿದ್ದ ವಕೀಲನನ್ನು ಬುಧವಾರ ಬಂಧಿಸಲಾಗಿದೆ. 72 ಗಂಟೆಗಳ  ಅವಧಿಯಲ್ಲಿ ಎರಡು ಬಾರಿ ಈ ದಾಳಿಯನ್ನು ಕೈಗೊಳ್ಳಲಾಗಿತ್ತು. 
 
ಆರೋಪಿ ಚೌಹಾನ್ ಬಂಧನಕ್ಕೊಳಪಟ್ಟ ಕೆಲವೇ ಗಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಪಟ್ಟ ಮೂರನೆಯ ವಕೀಲ ಇವರಾಗಿದ್ದು ನಿನ್ನೆ ಸಂಜೆ ತಿಲಕ್ ಮಾರ್ಗ್ ಪೊಲೀಸ್ ಠಾಣೆಗೆ ಬಂದಿದ್ದರು. ಮೊದಲ ಎರಡು ಸಮನ್ಸ್‌ಗಳಿಗಾತ ಸ್ಪಂದಿಸಿರಲಿಲ್ಲ. 
 
ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ದೇಶಭಕ್ತ ಎಂದು ಬಡಾಯಿ ಕೊಚ್ಚಿಕೊಳ್ಳುವ,  ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ತನ್ನ ಜತೆ ಕೈ ಜೋಡಿಸಿ ಎಂದು ಮನವಿ ಮಾಡಿಕೊಳ್ಳುವ ಚೌಹಾನ್ ದೆಹಲಿ ಪೊಲೀಸರು ಎರಡು ಬಾರಿ ಸಮನ್ಸ್ ನೀಡಿದರೂ ಅದನ್ನು ಕಡೆಗಣಿಸಿದ್ದ. ಫೆಬ್ರವರಿ 15 ಮತ್ತು 17 ರಂದು ನಡೆದ ದಾಳಿಗಳಿಗೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಮೂವರು ವಕೀಲರಲ್ಲಿ ಕೊನೆಯದಾಗಿ ತನಿಖೆಗೆ ಹಾಜರಾದವ ಚೌಹಾನ್ ಆಗಿದ್ದಾನೆ. ಮತ್ತಿಬ್ಬರು ವಕೀಲರಾದ ಓಂ ಶರ್ಮಾ ಶನಿವಾರ ಮತ್ತು ಯಶ್ಪಾಲ್ ಸಿಂಗ್ ಮಂಗಳವಾರ ಬಂಧನಕ್ಕೊಳಪಟ್ಟಿದ್ದರು ಮತ್ತು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 

ವೆಬ್ದುನಿಯಾವನ್ನು ಓದಿ