ಆರ್‌ಜೆಡಿ ಪಕ್ಷವನ್ನು ತೊರೆದವರಿಗೆ ಮತ್ತೆ ಪಕ್ಷದಲ್ಲಿ ಸ್ಥಾನವಿಲ್ಲ: ಲಾಲು ಪ್ರಸಾದ್

ಭಾನುವಾರ, 3 ಜನವರಿ 2016 (10:54 IST)
ಆರ್‌ಜೆಡಿ ಪಕ್ಷವನ್ನು ತೊರೆದು ಬಿಹಾರ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ಮತ್ತೆ ಪಕ್ಷಕ್ಕೆ ಮರಳಲು ಯತ್ನಿಸುತ್ತಿರುವ ನಾಯಕರಿಗೆ ಸ್ವಾಗತ ಕೋರುವುದಿಲ್ಲ ಎಂದು ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. 
 
ಬಿಹಾರ್ ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷವನ್ನು ತೊರೆದವರಿಗೆ ಮತ್ತೆ ಪಕ್ಷದಲ್ಲಿ ಸ್ಥಾನವಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
 
ಆರ್‌ಜೆಡಿ ಪಕ್ಷವನ್ನು ತೊರೆದ ನಾಯಕರು ಇದೀಗ ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಅನುಮತಿ ಕೇಳುತ್ತಿದ್ದಾರೆ. ಆದರೆ, ಅಂತಹ ಅವಕಾಶ ಅವರಿಗೆ ದೊರೆಯುವುದಿಲ್ಲ ಎಂದು ತಮ್ಮದೇ ಶೈಲಿಯಲ್ಲಿ ಗುಡುಗಿದ್ದಾರೆ.
 
ಆರ್‌ಜೆಡಿ ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳ್ಳಲು ಬಯಸುವ ನಾಯಕರಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನನ್ನ ನಿಲುವು ತಿಳಿಸಬೇಕು ಎಂದು ಕೋರಿದ್ದಾರೆ.
 
ಆರ್‌ಜೆಡಿ ಪಕ್ಷ ಇಕ್ಕಟ್ಟಿನ ಸ್ಥಿತಿ ಎದುರಿಸುತ್ತಿದ್ದಾಗ ಪಕ್ಷಕ್ಕೆ ಬೆಂಬಲ ನೀಡುವುದು ಬಿಟ್ಟು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿ, ಇದೀಗ ಬಿಹಾರ್‌ನಲ್ಲಿ ಆರ್‌ಜೆಡಿ ಅಧಿಕಾರಕ್ಕೆ ಬಂದ ನಂತರ ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಒಲವು ತೋರುತ್ತಿರುವವರಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ಹೇಳಿದ್ದಾರೆ. 
 
ಕಳೆದ 2015ರಲ್ಲಿ ನಡೆದ 243 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ 80 ಸೀಟುಗಳನ್ನು ಗೆಲ್ಲುವ ಮೂಲಕ ಆರ್‌ಜೆಡಿ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
 
ಲಾಲು ಪ್ರಸಾದ್ ಜನೆವರಿ 17 ರಂದು ಪಕ್ಷದ ಮುಖ್ಯಸ್ಥರಾಗಿ ಪುನರಾಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ