ಮುಂದಿನ ತಿಂಗಳು ಫ್ರಾನ್ಸ್ , ಜರ್ಮನಿ, ಕೆನಡಾ ದೇಶಗಳಿಗೆ ಭೇಟಿ ನೀಡಲಿರುವ ಮೋದಿ

ಗುರುವಾರ, 26 ಮಾರ್ಚ್ 2015 (17:25 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಫ್ರಾನ್ಸ್ , ಜರ್ಮನಿ ಮತ್ತು ಕೆನಡಾ ದೇಶಗಳಿಗೆ ಏಪ್ರಿಲ್ 9 ರಿಂದ 16ರ ವರೆಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಭಾರತದ ವಿದೇಶಾಂಗ ನೀತಿಯ ಬಗ್ಗೆ ಪಶ್ಚಿಮ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡುವುದಲ್ಲದೇ ಹೂಡಿಕೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವಂತೆ ಪ್ರಧಾನಿ ಮೋದಿ ಕೋರಲಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.

ಮೋದಿ ಪ್ರವಾಸದ ಆರಂಭದಲ್ಲಿ ಮೊದಲಿಗೆ ಏಪ್ರಿಲ್ 9 ರಿಂದ 12 ರವರೆಗೆ ಫ್ರಾನ್ಸ್ ದೇಶಕ್ಕೆ ಭೇಟಿ ನೀಡಲಿದ್ದು, ಫ್ರಾನ್ಸ್ ಅದ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆಯವರನ್ನು ಭೇಟಿ ಮಾಡಲಿದ್ದಾರೆ.

ಫ್ರಾನ್ಸ್‌ನಲ್ಲಿರುವ ವಿವಿಧ ಸಮಾಜದ ಗಣ್ಯರು ಹಾಗೂ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫ್ರಾನ್ಸ್ ಭೇಟಿಯ ನಂತರ ಏಪ್ರಿಲ್ 12 ರಿಂದ ಏಪ್ರಿಲ್ 14ರವರೆಗೆ ಮೋದಿ ಜರ್ಮನಿಗೆ ಭೇಟಿ ನೀಡಲಿದ್ದಾರೆ. ಮೆಸ್ಸಿ ಟ್ರೇಡ್ ಫೇರ್ ಫಾರ್ ಇಂಡಸ್ಟ್ರೀಯಲ್ ಟೆಕ್ನಾಲಾಜಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜರ್ಮನಿಯ ಚಾನ್ಸಲರ್ ಅಂಜೆಲಾ ಮೆರ್ಕಲ್ ಮತ್ತು ಇತರ ನಾಯಕರನ್ನು ಭೇಟಿ ಮಾಡಲಿದ್ದಾರೆ.

ನರೇಂದ್ರ ಮೋದಿ ಏಪ್ರಿಲ್ 14 ರಿಂದ ಏಪ್ರಿಲ್ 16 ರ ವರೆಗೆ ಕೆನಡಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಮೂರು ರಾಷ್ಟ್ರಗಳ ಪ್ರವಾಸದ ಸಂದರ್ಭದಲ್ಲಿ ಆಯಾ ದೇಶಗಳ ರಾಜಧಾನಿ ಸೇರಿದಂತೆ ಇತರ ನಗರಗಳಿಗೂ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಕ್ಬರುದ್ದೀನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ