ಕಲಾಂ ಅಂತ್ಯಸಂಸ್ಕಾರ: ಲೋಕಸಭೆ ನಾಳೆಗೆ ಮುಂದೂಡಿಕೆ

ಗುರುವಾರ, 30 ಜುಲೈ 2015 (16:11 IST)
ತಮಿಳುನಾಡಿನ ರಾಮೇಶ್ವರದಲ್ಲಿ ಇಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಂತ್ಯಸಂಸ್ಕಾರ ನಡೆಯುತ್ತಿರುವ ಕಾರಣಕ್ಕೆ ಕಲಾಪ ನಡೆಸದೇ ಲೋಕಸಭೆಯನ್ನು ನಾಳೆಗೆ ಮುಂದೂಡಲಾಯಿತು. 

 
ಲೋಕಸಭೆ ಆರಂಭವಾಗುತ್ತಿದ್ದಂತೆ ಲೋಕಸಭೆಯ ಮಾಜಿ ಸದಸ್ಯರಾದ ಪಾಣಿಗ್ರಾಹಿ, ಆರ್.ಎಸ್. ಗವಾಯಿ ಮತ್ತು ಬಿ.ಕೆ. ಹಂಡಿಕ್ ನಿಧನಕ್ಕೆ ಸ್ಪೀಕರ್ ಸುಮಿತ್ರಾ ಮಹಾಜನ್ ಸಂತಾಪ ವ್ಯಕ್ತ ಪಡಿಸಿದರು.
 
ಗುರುದಾಸ್‌ಪುರದಲ್ಲಿ ನಡೆದ ಉಗ್ರರ ದಾಳಿಯನ್ನು ಸಹ ಉಲ್ಲೇಖಿಸಿದ ಮಹಾಜನ್, "ಉಗ್ರರ ಜತೆಗಿನ ಕಾದಾಟದಲ್ಲಿ ಹುತಾತ್ಮರಾದ ಎಸ್.ಪಿ ಬಲ್ಜೀತ್ ಸಿಂಗ್, ಹೋಮ್ ಗಾರ್ಡ್ಸ್‌ಗಳಾದ ಬೋಧ್ ರಾಜ್, ದೇಸ್ ರಾಜ್ ಹಾಗೂ ಉಳಿದಿಬ್ಬರು ನಾಗರಿಕರನ್ನು ಸಹ ನೆನಪಿಸಿಕೊಂಡು ಲೋಕಸಭೆ ಈ ದುಷ್ಟ ಕೃತ್ಯವನ್ನು ಬಲವಾಗಿ ಖಂಡಿಸುತ್ತದೆ", ಎಂದು ಹೇಳಿದರು. 
 
ಕರ್ತವ್ಯ ನಿರತ ಸೈನಿಕರು ಮತ್ತು ಪೊಲೀಸರ ಹೆಸರನ್ನು ಹೇಳಿ ಲೋಕಸಭೆಯಲ್ಲಿ ಗೌರವ ಸಲ್ಲಿಸಬೇಕು ಎಂದು ಇತೀಚಿಗೆ ಲೋಕಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು. 
 
ಗೌರವಾರ್ಪಣೆ ಮಾಡಿದ ಬಳಿಕ ಮಹಾಜನ್ ಕಲಾಂ ಅಂತ್ಯಸಂಸ್ಕಾರ ನಡೆಯುತ್ತಿರುವ ಕಾರಣಕ್ಕೆ ಕಲಾಪವನ್ನು ನಾಳೆಗೆ ಮುಂದೂಡಿದರು. ಲೋಕಸಭೆಯನ್ನು ಹಠಾತ್ ಆಗಿ ಮುಂದೂಡಿದ್ದು ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರಿಗೆ  ಆಶ್ಚರ್ಯವನ್ನು ತಂದಿಟ್ಟಿತು. ಕಲಾಪ ಮುಂದೂಡಲ್ಪಟ್ಟಾಗ ಸಿಂಗ್ ತಮ್ಮ ಜಾಗದಲ್ಲಿಯೇ ನಿಂತುಕೊಂಡಿದ್ದರು. 

ವೆಬ್ದುನಿಯಾವನ್ನು ಓದಿ