ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂಗೆ ಲುಕ್ಔಚ್ ನೋಟಿಸ್ ಜಾರಿ

ಶುಕ್ರವಾರ, 4 ಆಗಸ್ಟ್ 2017 (15:15 IST)
ಫೇಮಾ ಕಾಯ್ದೆ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದೆ. 
 
ಕಳೆದ 10 ದಿನಗಳ ಹಿಂದೆ ಸಿಬಿಐ ಜಾರಿಗೊಳಿಸಿದ ಲುಕ್‌ಔಟ್ ನೋಟಿಸ್ ವಿರುದ್ಧ ಕಾರ್ತಿ ಚಿದಂಬರಂ ಮದ್ರಾಸ್ ಹೈಕೋರ್ಟ್ ಮೊರೆಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಮದ್ರಾಸ್ ಹೈಕೋರ್ಟ್‌ನಲ್ಲಿ ಕಾರ್ತಿ ಚಿದಂಬರಂ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಲುಕ್‌ಔಟ್ ನೋಟಿಸ್ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಗೃಹ ಸಚಿವಾಲಯಕ್ಕೆ ಆದೇಶಿಸಿ ವಿಚಾರಣೆಯನ್ನು ಸೋಮುವಾರಕ್ಕೆ ಮುಂದೂಡಿದೆ. 
 
ಐಎನ್‌ಎಕ್ಸ್ ಮೀಡಿಯಾ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಮಾಲೀಕತ್ವ ಹೊಂದಿದ್ದರೂ ಸಿಬಿಐ ಕಾನೂನುಬಾಹಿರವಾಗಿ ವಿಚಾರಣೆಗೆ ಹಾಜರಾಗುವಂತೆ ಒತ್ತಡ ಹೇರುತ್ತಿದೆ ಎಂದು ಕಾರ್ತಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.  
 
ಕಳೆದ ಕೆಲವು ದಿನಗಳ ಹಿಂದೆ ಸಿಬಿಐ ಅಧಿಕಾರಿಗಳು ಕಾರ್ತಿ ಮನೆಯ ಮೇಲೆ ದಾಳಿ ನಡೆಸಿದ್ದರು. ಸಿಬಿಐ ಸಮನ್ಸ್ ಮತ್ತು ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ಬಗ್ಗೆ ಚಿದಂಬರಂ ಖಚಿತಪಡಿಸಿಲ್ಲ, ತಳ್ಳಿಯೂ ಹಾಕಿಲ್ಲ ಎಂದು ಮೂಲಗಳು ತಿಳಿಸಿವೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಕಾರ್ತಿ ಚಿದಂಬರಂ, ನಾನು ದೇಶದಲ್ಲಿಯೇ ಇದ್ದು ವಿದೇಶಕ್ಕೆ ಹೋಗುವ ಯಾವುದೇ ಉದ್ದೇಶವಿಲ್ಲ. ಸಿಬಿಐ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ