ಮುಸ್ಲಿಂ ಯುವಕನ ಮೇಲಿನ ಪ್ರೇಮದಿಂದ ಐಸಿಎಸ್ ಸೇರ್ಪಡೆ ಬಯಸಿದ ನಿವೃತ್ತ ಸೇನಾಧಿಕಾರಿ ಪುತ್ರಿ

ಶನಿವಾರ, 10 ಅಕ್ಟೋಬರ್ 2015 (16:58 IST)
ಕಳೆದ ಮೂರು ತಿಂಗಳುಗಳ ಹಿಂದೆ ತಮ್ಮ ಪುತ್ರಿ ಇಸ್ಲಾಮಿಕ್ ಸ್ಟೇಟ್‌ ಸೇರ್ಪಡೆಗೊಳ್ಳುವ ಯತ್ನದಲ್ಲಿದ್ದಾಳೆ ಎಂದು ನಿವೃತ್ತ ಸೇನಾಧಿಕಾರಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದರು. ಇದೀಗ, ಪುತ್ರಿ ತನ್ನ ಪೋಷಕರ ಮೇಲೆ ಸೇಡು ತೀರಿಸಿಕೊಳ್ಳಲು ಹಾಗೇ ಮಾಡಿರುವ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.
 
25 ವರ್ಷ ವಯಸ್ಸಿನ ಹಿಂದು ಯುವತಿ, ಮುಸ್ಲಿಂ ಯುವಕನೊಂದಿಗೆ ಪ್ರೇಮಪಾಶದಲ್ಲಿ ಸಿಲುಕಿದ್ದಳು. ಮುಸ್ಲಿಂ ಯುವಕನನ್ನೇ ವಿವಾಹವಾಗುವುದಾಗಿ ತಂದೆ ತಾಯಿ ಮುಂದೆ ಬೇಡಿಕೆಯಿಟ್ಟಿದ್ದಳು. ಆದರೆ, ಪೋಷಕರು ಆಕೆಯ ಪ್ರಸ್ತಾವನೆ ತಿರಸ್ಕರಿಸಿದ್ದರಿಂದ ಆಕ್ರೋಶಗೊಂಡು ಪೋಷಕರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಳು.  
 
ಇಸ್ಲಾಮಿಕ್ ಸಿದ್ಧಾಂತದ ಬಗ್ಗೆ ಒಲವಿರದಿದ್ದರೂ ಇಸ್ಲಾಮಿಕ್ ಸ್ಟೇಟ್ ವೆಬ್‌ಸೈಟ್‌ಗಳಿಗೆ ಭೇಟಿ ಕೊಡುವುದನ್ನು ಮುಂದುವರಿಸಿದ್ದಳು. ಪೋಷಕರ ಮೇಲಿನ ಸೇಡಿನಿಂದಾಗಿ ಇಂಟರ್‌ನೆಟ್‌ನಲ್ಲಿ ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ ಕಲೆಹಾಕಿದ್ದಲ್ಲದೇ ಐಸಿಎಸ್ ಚಟುವಟಿಕೆಗಳ ಬಗ್ಗೆಯೂ ಹೆಚ್ಚಿನ ಆಸಕ್ತಿ ತೋರಿದ್ದಳು ಎಂದು ಗುಪ್ತಚರ ದಳದ ಅಧಿಕಾರಿಗಳು ತಿಳಿಸಿದ್ದಾರೆ. 
 
ತನ್ನ ಬಾಯ್‌ಫ್ರೆಂಡ್ ಇಂಟರ್‌ನೆಟ್‌ನಲ್ಲಿ ಐಸಿಎಸ್ ಸಂಘಟನೆಯ ಸಿದ್ದಾಂತಗಳನ್ನು ಓದುವಂತೆ ಒತ್ತಾಯಿಸುತ್ತಿದ್ದ. ಐಸಿಎಸ್ ಸಂಘಟನೆಯೊಂದಿಗೆ ಹಲವಾರು ಬಾರಿ ಆತ ಮಾಹಿತಿ ಕೂಡಾ ಹಂಚಿಕೊಂಡಿದ್ದ ಎಂದು ಯುವತಿ ತಿಳಿಸಿದ್ದಾಳೆ.
 
ಯುವತಿಯ ಪ್ರೇಮಿ ಐಸಿಎಸ್ ಸಂಘಟನೆ ಹಾಗೂ ಇತರ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಗುಪ್ತಚರ ದಳದ ಅಧಿಕಾರಿಗಳು ಶಂಕಿಸಿದ್ದಾರೆ. 
 
ಪುತ್ರಿಯ ಅನುಮಾನಾಸ್ಪದ ನಡೆಗಳಿಂದಾಗಿ ಆತಂಕಗೊಡ ತಂದೆ, ಮೂರು ತಿಂಗಳುಗಳ ಹಿಂದೆ ಆಕೆಯ ಲ್ಯಾಪ್‌ಟಾಪ್‌ ಪರಿಶೀಲಿಸಿ ನೋಡಿದಾಗ, ಪುತ್ರಿ ಐಸಿಎಸ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗುವ ಆಸಕ್ತಿ ತೋರಿದ್ದನ್ನು ಕಂಡು ಆಘಾತಗೊಂಡು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. 
 
ಯುವತಿ ಐಸಿಎಸ್ ಉಗ್ರಗಾಮಿ ಸಂಘಟನೆಯ ಯಾವುದೇ ಸದಸ್ಯರೊಂದಿಗೆ ಸಂಪರ್ಕ ಹೊಂದಿಲ್ಲವಾದ್ದರಿಂದ ಅಪಾಯದಿಂದ ಪಾರಾಗಿದ್ದಾಳೆ. ಆಕೆ ಐಸಿಎಸ್‌ನೊಂದಿಗೆ ಸಂಪರ್ಕ ಹೊಂದಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎನ್ನಲಾಗಿದೆ.  
 
ಯುವತಿ ಆಸ್ಟ್ರೇಲಿಯಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವಾಗ ಮುಸ್ಲಿಂ ಯುವಕನ ಪ್ರೇಮದಲ್ಲಿ ಸಿಲುಕಿದ್ದಳು. ಆಸ್ಟ್ರೇಲಿಯಾಗೆ ಪರಾರಿಯಾಗಿರುವ ಮುಂಬೈ ಮೂಲದ ಮುಸ್ಲಿಂ ಯುವಕನ ಬಗ್ಗೆ ತನಿಖೆ ನಡೆಸುವಂತೆ ಆಸ್ಟ್ರೇಲಿಯಾ ಅಧಿಕಾರಿಗಳಿಗೆ ಭಾರತದ ಗುಪ್ತಚರ ದಳದ ಅಧಿಕಾರಿಗಳು ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ